ಗುಣಮಟ್ಟದ ಬಿತ್ತನೆ ಬೀಜ ವಿತರಿಸಿ: ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಸೂಚನೆ

0 1
Published on

ತುಮಕೂರು: ಜಿಲ್ಲೆಯಲ್ಲಿ ಮಳೆ ಆರಂಭವಾಗಿದ್ದು, ಪೂರ್ವ ಮುಂಗಾರು ಬೆಳೆಗೆ ಅಗತ್ಯವಾದ ಗುಣಮಟ್ಟದಿಂದ ಕೂಡಿರುವ ಬಿತ್ತನೆ ಬೀಜಗಳನ್ನು ಸಕಾಲಕ್ಕೆ ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಸುವಂತೆ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ 2022ರ ಮುಂಗಾರು ಹಂಗಾಮು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಹಲಸಂದೆ ಬಿತ್ತನೆ ಬೀಜಗಳು ಗುಣಮಟ್ಟದಿಂದ ಕೂಡಿರುವ ಬಗ್ಗೆ ಖಾತರಿಪಡಿಸಿಕೊಂಡು ಜಿಲ್ಲೆಯ 50 ರೈತ ಸಂಪರ್ಕ ಕೇಂದ್ರಗಳಲ್ಲದೆ, ಹೆಚ್ಚುವರಿ 8 ಮಾರಾಟ ಕೇಂದ್ರಗಳಿಗೆ ಸರಬರಾಜು ಮಾಡುವಂತೆ ತಿಳಿಸಿದರು.

ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುವ ಬಿತ್ತನೆ ಬೀಜಗಳನ್ನು ಅರ್ಹ ರೈತ ಫಲಾನುಭವಿಗಳಿಗೆ ವಿತರಿಸಲಾಗುವುದಲ್ಲದೆ, ಹೆಸರು, ತೊಗರಿ, ಶೇಂಗಾ, ಬಿತ್ತನೆ ಬೀಜಗಳ ಕೊರತೆ ಕಂಡುಬಂದಲ್ಲಿ ಕರ್ನಾಟಕ ಸೀಡ್​ ಫೇಡರೇಷನ್​ ಕಾರ್ಪೊರೇಷನ್​ ಅಗತ್ಯ ಪೂರೈಕೆ ಮಾಡಬೇಕು ಎಂದರು.

ರಾಜ್ಯದಿಂದ ಜಿಲ್ಲೆಗೆ ನಿಗದಿಪಡಿಸಿರುವ ರಸಗೊಬ್ಬರಗಳನ್ನು ಸಕಾಲಕ್ಕೆ ಪೂರೈಕೆ ಮಾಡುವಂತೆ ವಿವಿಧ ರಸಗೊಬ್ಬರಗಳ ಸರಬರಾಜು ಏಜೆನ್ಸಿಗಳಿಗೆ ಸೂಚಿಸಿದ ಅವರು, ಮಾರಾಟಗಾರರು ಕಡ್ಡಾಯವಾಗಿ ಪಿಒಎಸ್​ ಯಂತ್ರದ ಮುಖಾಂತರವೇ ರಸಗೊಬ್ಬರ ವಿತರಣೆ ಮಾಡಬೇಕು ಎಂದರು.

ರಸಗೊಬ್ಬರ ಅನಾವಶ್ಯಕ ದಾಸ್ತಾನು ಹಾಗೂ ಎಂಆರ್​ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ಹಾಗೂ ಅಗತ್ಯ ವಸ್ತುಗಳ ಕಾಯ್ದೆ 1955ರ ಪ್ರಕಾರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯ ಎಲ್ಲ ತಾಲೂಕುಗಳ ಕೃಷಿ ಸಹಾಯಕ ಅಧಿಕಾರಿಗಳು ಇದ್ದರು.

ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು, ಬಿತ್ತನೆ ಬೀಜಗಳ ಕೊರತೆ ಉಂಟಾದಲ್ಲಿ ಕರ್ನಾಟಕ ಸೀಡ್​ ಫೇಡರೇಷನ್​ ಕಾರ್ಪೊರೇಷನ್​ ಪೂರೈಸಬೇಕು, ರಸಗೊಬ್ಬರಗಳ ಸರಬರಾಜು ಮಾಡುವ ಏಜೆನ್ಸಿಗಳಿಂದ ಕೃಷಿ ಇಲಾಖೆಗೆ ಸಕಾಲದಲ್ಲಿ ಮಾಹಿತಿ ನೀಡಬೇಕು. > ರಾಜಸುಲೋಚನಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net