ಗುಣಮಟ್ಟದ ಜೋಳ ತನ್ನಿ

17 KAMPLI 02
Published on

ಕಂಪ್ಲಿ: ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಗೋದಾಮು ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಖರೀದಿ ಕೇಂದ್ರದ ಗುಣಮಟ್ಟ ಪರಿವೀಕ್ಷಕಿ ನವ್ಯಾ ಪ್ರಶಾಂತ್ ಮಾತನಾಡಿ, 51 ರೈತರಿಂದ 3238 ಕ್ವಿಂಟಾಲ್ ಜೋಳ ಖರೀದಿಗೆ ಹೆಸರು ನೋಂದಾಯಿಸಿಕೊಳ್ಳಲಾಗಿದೆ. ರೈತರು ಗುಣಮಟ್ಟದ, ಕಲಬೆರಕೆ ರಹಿತ ಜೋಳ ತರಬೇಕು. ಎಕರೆಗೆ 20 ಕ್ವಿಂಟಾಲ್‌ನಂತೆ ಗರಿಷ್ಠ 150 ಕ್ವಿಂಟಾಲ್ ಜೋಳ ಖರೀದಿಸಲಾಗುವುದು. ಮಾ.31ರತನಕ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್ ಮಾತನಾಡಿ, ರೈತರ ಬೇಡಿಕೆಯಂತೆ ಎಪಿಎಂಸಿ ಆವರಣ ಸ್ವಚ್ಛಗೊಳಿಸಿ ಶುದ್ಧ ಕುಡಿವ ನೀರು ಪೂರೈಸಲಾಗುತ್ತಿದೆ. ಬೀದಿದೀಪ ಹಾಗೂ ಇತರ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.

ಜೋಳ, ಭತ್ತ ಖರೀದಿಗೂ ಮುನ್ನ ಹೆಸರು ನೋಂದಾಯಿಸಿಕೊಂಡ ರೈತರಿಗೆ ಚೀಲದ ವ್ಯವಸ್ಥೆ ಕಲ್ಪಿಸಬೇಕು. ಜೋಳ, ಭತ್ತ ಖರೀದಿ ಕೇಂದ್ರವನ್ನು ಶಾಶ್ವತವಾಗಿ ತೆರೆಯಬೇಕು. ನೆಲ್ಲೂಡಿ ಗ್ರಾಮದವರಿಗೆ ಕಂಪ್ಲಿಯಲ್ಲಿ ಜೋಳ ಖರೀದಿಗೆ ಅವಕಾಶ ಕಲ್ಪಿಸುವಂತೆ ರೈತರಾದ ಗಂಗಣ್ಣ, ಕಾಗೆ ಈರಣ್ಣ, ಕೆ.ರಮೇಶ್, ಮುರಹರಿ ಇತರರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಜೋಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಭಾಸ್ಕರರೆಡ್ಡಿ, ಉಪಾಧ್ಯಕ್ಷೆ ಟಿ.ಎಂ.ಸಾವಿತ್ರಿ, ವ್ಯವಸ್ಥಾಪಕ ವೀರೇಶ್, ಆಹಾರ ನಿರೀಕ್ಷಕ ಬಿ.ವಿರೂಪಾಕ್ಷಗೌಡ, ಪ್ರಮುಖರಾದ ಗೋನಾಳ್ ಹೂವಣ್ಣ, ತಿಮ್ಮಪ್ಪ ನಾಯಕ, ಎನ್.ಆಂಜನೇಯಲು, ಕೆ.ವಿರೂಪಾಕ್ಷಪ್ಪ, ಭೀಮಲಿಂಗಪ್ಪ, ಪ್ರಭುಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net