

ಚಿತ್ರದುರ್ಗ: ಸರ್ಕಾರದಿಂದ ಹಣ ಖರ್ಚು ಮಾಡಿದ ಮೇಲೆ ಗುಣಮಟ್ಟದ ಕಾಮಗಾರಿ ಆಗಬೇಕೆಂದು ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳಿಗೆ ಸೂಚಿಸಿದರು.
ತಾಲೂಕಿನ ಡಿ. ಮದಕರಿಪುರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಗ್ರಾಮದಿಂದ ತಣಿಗೆ ಹಳ್ಳಿವರೆಗೆ ನೂತನ ಸಿಸಿ ರಸ್ತೆ, ಚರಂಡಿ, ಹೊಸ ಶಾಲಾ ಕಟ್ಟಡ, ಆಟದ ಮೈದಾನ ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರ 63 ಜಾತಿಗಳಿಗೆ ಶೇ. 5ರಷ್ಟು ಮೀಸಲಾತಿ ನೀಡಿತ್ತು. ಈಗಿನ ಸರ್ಕಾರ ಲಂಬಾಣಿ, ಕೊರಚ, ಕೊರಮ, ಭೋವಿ ಸಮುದಾಯಕ್ಕೆ ಶೇ. 3ರಷ್ಟು ಮೀಸಲಾತಿ ನೀಡಿರುವುದು ಅನ್ಯಾಯ. ಈ ಕುರಿತು ಮೊದಲು ನಾವೆಲ್ಲರೂ ಎಚ್ಚೆತ್ತು ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಹೊಳಲ್ಕೆರೆ ಕ್ಷೇತ್ರ ಶಿವನಿ, ಅಜ್ಜಂಪುರದವರೆಗೂ ಇದೆ. ತಾಲೂಕಿನ 493 ಹಳ್ಳಿಗಳಲ್ಲಿಯೂ ಸಿಸಿ ರಸ್ತೆ, ರೈತರಿಗೆ ವಿದ್ಯುತ್, ಶಾಲಾ-ಕಾಲೇಜುಗಳ ನಿರ್ಮಾಣ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಆಶ್ವಾಸನೆ ಕೊಡುವ ರಾಜಕಾರಣಿ ನಾನಲ್ಲ. ಸಾರ್ವಜನಿಕರ ಮಧ್ಯೆ ಇದ್ದುಕೊಂಡು ಅಗತ್ಯ ಮೂಲಸೌಕರ್ಯ ಒದಗಿಸುವುದರ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಪಶು ವೈದ್ಯರ ಕೊರತೆ ಗಮನಿಸಿ ಮೊಬೈಲ್ ವ್ಯಾನ್‌ಗಳ ಮೂಲಕ ಸೌಲಭ್ಯ ಒದಗಿಸಲಾಗಿದೆ. ರೈತರು ತಮ್ಮ ಜಾನುವಾರುಗಳಿಗೆ ಏನೇ ತೊಂದರೆಯಾದರೂ ತಕ್ಷಣ ಕರೆ ಮಾಡಿದರೆ, ನೀವಿರುವಲ್ಲೇ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಪಂ ಅಧ್ಯಕ್ಷೆ ಕಮಲಾಕ್ಷಿ, ಮಾಜಿ ಅಧ್ಯಕ್ಷ ಮೋಹನ್, ಸದಸ್ಯರಾದ ರಮೇಶ್, ಕುಬೇರಮ್ಮ, ರುದ್ರಣ್ಣ, ವಿಷ್ಣು, ಮೋಹನ್‌ಕುಮಾರ್, ಮೂರ್ತಣ್ಣ, ಗಂಗಣ್ಣ, ಶೇಖರಪ್ಪ, ಬಸವರಾಜ್, ಪಂಚಾಕ್ಷರಿ, ಕೃಷ್ಣಣ್ಣ, ಗ್ರಾಮದ ಮುಖಂಡರು ಇದ್ದರು.