

ಬಾಗಲಕೋಟೆ: ಗುಣಮಟ್ಟದ ಕಾಮಗಾರಿಗಳಿಗೆ ಅಽಕಾರಿಗಳು ಆದ್ಯತೆ ನೀಡಿ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನವನಗರದ ಹೊಸ ನಿರೀಕ್ಷಣಾ ಮಂದಿರದಲ್ಲಿ ಮಂಗಳವಾರ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗುವ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಇದರ ಸಂಪೂರ್ಣ ಜವಾಬ್ದಾರಿಯನ್ನು ಸಹಾಯಕ ಕಾರ್ಯನಿವಾಹಕ ಅಭಿಯಂತರರಿಗೆ ವಹಿಸಲಾಗುತ್ತಿದ್ದು, ಲೋಪದೋಷಗಳು ಏನಾದರು ಕಂಡು ಬಂದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಗುತ್ತಿಗೆದಾರರಿಂದ ಸರಿಯಾದ ಕೆಲಸ ಮಾಡಿಸಿಕೊಳ್ಳಬೇಕು. ಗುತ್ತಿಗೆದಾರರರು ಹಣ ಉಳಿಸಿಕೊಳ್ಳಲು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ನಮ್ಮ ರಸ್ತೆ ಮತ್ತು ಕಟ್ಟಡಗಳನ್ನು ಹಾಳು ಮಾಡುವ ಸಂಭವನೀಯತೆ ಇರುವದರಿಂದ ಅಧಿಕಾರಿಗಳು ಕಾಮಗಾರಿಯ ಸ್ಥಳಗಳಿಗೆ ಖುದ್ದು ಭೇಟಿ ನೀಡಬೇಕು. ಶಾಲೆ ಮತ್ತು ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿದ ನಂತರ ಯಾವುದೇ ಕಾರಣಕ್ಕೂ ದೂರುಗಳು ಬರದಂತೆ ಕಾರ್ಯನಿರ್ವಹಿಸಿರಿ. ಯಾವುದೇ ಕಾಮಗಾರಿಯಾಗಿದ್ದರೂ ಅದರ ಮುಂಚಿನ, ನಂತರದ ಹಾಗೂ ಅಂತಿಮ ವರದಿಯನ್ನು ಛಾಯಾಚಿತ್ರ ಹಾಗೂ ವೀಡಿಯೊ ತುಣುಕುಗಳೊಂದಿಗೆ ಸಚಿವಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಒಂದು ಬಾರಿ ರಸ್ತೆ ಕಾಮಗಾರಿಯಾದಲ್ಲಿ, ಅದು ಕನಿಷ್ಠ ೧೦ ವರ್ಷವಾದರು ಬಾಳಿಕೆ ಬರುವಂತಿರಬೇಕು ಎಂದು ಹೇಳಿದರು.
ರಸ್ತೆಗಳನ್ನು ತಿಪ್ಪಿ ಗುಂಡಿಗಳು ಮತ್ತು ಬೆಳೆಗಳಿಂದ ಅತೀಕ್ರಮಣವಾಗದಂತೆ ಹಾಗೂ ರಸ್ತೆ ಮಧ್ಯದಲ್ಲಿ ಚರಂಡಿ ನೀರು ಅಥವಾ ಮಳೆ ನೀರು ನಿಲ್ಲದಂತೆ ಸಂರಕ್ಷಿಸಬೇಕು. ಇಲಾಖೆಗೆ ಸಾಕಷ್ಟು ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಽಕಾರಿಗಳು ಕ್ರೀಡಾಂಗಣ, ಗ್ರಂಥಾಲಯದಂತಹ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕಾಮಗಾರಿಗಳಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಬಾಗಲಕೋಟೆ ವಿಭಾಗದ ಕಾರ್ಯನಿವಾಹಕ ಅಭಿಯಂತರ ರಾಜಶೇಖರ ಕಡಿವಾಲ ಮಾತನಾಡಿ, ನಬಾರ್ಡ ೨೭ ಯೋಜನೆಯಡಿ ೩೫.೮೫ ಕೋಟಿ ರೂ. ಅನುದಾನದಲ್ಲಿ ೭ ಸೇತುವೆ ನಿರ್ಮಾಣ ಕಾಮಗಾರಿಗಳಿದ್ದು, ಇದರಲ್ಲಿ ೧ ಸೇತುವೆ ಪೂರ್ಣಗೊಂಡಿರುತ್ತದೆ. ಬಾಕಿ ಉಳಿದ ೬ ರಸ್ತೆ ಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಕರ್ನಾಟಕ ರಸ್ತೆ ಅಭಿವೃದ್ಧಿ ಯೋಜನೆ ನಾಲ್ಕನೆ ಹಂತದ ೧೫೪ ಕೋಟಿ ರೂ.ಅನುದಾನದಲ್ಲಿ ೬ ಪ್ಯಾಕೇಜ್ ಅಡಿ ೧೧ ರಸ್ತೆಗಳ ಮುಖಾಂತರ ೭೭.೩೦ ಕಿ ಮೀ ಉದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ಮುಖ್ಯ ಅಭಿಯಂತರ ಎಚ್.ಸುರೇಶ, ಬೆಳಗಾವಿ ವೃತ್ತದ ಅಧಿಕ್ಷಕ ಅಭಿಯಂತರ ಅರುಣಕುಮಾರ ಪಾಟೀಲ ಹಾಗೂ ಜಿಲ್ಲೆಯ ಎಲ್ಲ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ಇದ್ದರು.