ಗುಣಮಟ್ಟದ ಕಾಮಗಾರಿ ಕೈಗೊಳ್ಳದಿದ್ದರೆ ಕ್ರಮ

16kmr2
ಕಮಲನಗರ ತಾಲೂಕಿನ ಹೊರಂಡಿ ಗ್ರಾಮದ ಹೊರ ವಲಯದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಪ್ರಭು ಚವ್ಹಾಣ್ ಶನಿವಾರ ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ, ಜೆಇ ಬಾಲಾಜಿ ಪೋಕಲವಾರ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಬಸವರಾಜ ಪಾಟೀಲ್ ಇತರರಿದ್ದರು.
Published on

ಕಮಲನಗರ: ತಾಲೂಕಿನ ಹೊರಂಡಿ ಗ್ರಾಮದ ಹೊರ ವಲಯದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಪ್ರಭು ಚವ್ಹಾಣ್ ಶನಿವಾರ ದಿಢೀರ್ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು.

ಕಟ್ಟಡ ನಿರ್ಮಾಣದ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ವಿವರಣೆ ಪಡೆದರು. ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಸರಿಯಾಗಿ ಕ್ಯೂರಿಂಗ್ ಮಾಡುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಕಟ್ಟಡ ಬೇಗ ಶಿಥಿಲವಾಗುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ದೂರಿದರು.

ಇದರಿಂದ ಕೋಪಗೊಂಡ ಶಾಸಕರು, ಕಿರಿಯ ಇಂಜಿನಿಯರರು ಕಡ್ಡಾಯವಾಗಿ ಕಾಮಗಾರಿ ಸ್ಥಳದಲ್ಲಿದ್ದು ಗಮನಿಸಬೇಕು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಮತ್ತಿತರೆ ಅಧಿಕಾರಿಗಳು ಕೂಡ ಕಾಮಗಾರಿ ಸ್ಥಳಕ್ಕೆ ಆಗಾಗ ಭೇಟಿ ನೀಡುತ್ತಿರಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ಕಚೇರಿ ಬಿಟ್ಟು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರು ಮನಬಂದಂತೆ ಕೆಲಸ ಮಾಡುವ ಸಾಧ್ಯತೆ ಇರುತ್ತದೆ. ಕೆಲಸದ ವಿಷಯದಲ್ಲಿ ಗಂಭೀರತೆ ವಹಿಸಬೇಕು. ನಿಗದಿತ ಕಾಲಾವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟದ ಉಪಕರಣಗಳನ್ನು ಬಳಕೆ ಮಾಡಬೇಕು. ಯೋಜನೆಯಲ್ಲಿರುವಂತೆ ಕೆಲಸವಾಗಬೇಕು. ಮುಂಬರುವ ಮಾರ್ಚ್ ವೇಳೆಗೆ ಹೊರಂಡಿಯಲ್ಲಿ ಸುಂದರವಾದ ವಸತಿ ಶಾಲೆಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.

ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಎಇಇ ಪ್ರೇಮಸಾಗರ, ಜೆಇ ಬಾಲಾಜಿ ಪೋಕಲವಾರ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಬಸವರಾಜ ಪಾಟೀಲ್, ಶಿವಾಜಿರಾವ ಪಾಟೀಲ್, ರಂಗರಾವ ಜಾಧವ, ಶಿವಾನಂದ ಒಡ್ಡೆ, ಸಚಿನ ರಾಠೋಡ್, ಶಿವರಾಜ ಅಲ್ಮಾಜೆ, ಶಾಲಿವಾನ ಬಿರಾದಾರ, ಸಂತೋಷ ಬಿರಾದಾರ, ಬಂಟಿ ರಾಂಪುರೆ ಇತರರಿದ್ದರು.

ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕೆಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನ ವಹಿಸಿ ಹೊರಂಡಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಮಂಜೂರು ಮಾಡಿಸಿ ೧೫ ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಗುಣಮಟ್ಟದ ಕುರಿತು ಯಾವುದೇ ರೀತಿಯ ದೂರುಗಳು ಬಂದರೆ ಸಹಿಸುವುದಿಲ್ಲ.

| ಪ್ರಭು ಚವ್ಹಾಣ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net