ಗುಣಮಟ್ಟದ ಆಹಾರ,ನೀರು ನೀಡಿ:ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಸೂಚನೆ

ಗುಣಮಟ್ಟದ ಆಹಾರ,ನೀರು ನೀಡಿ:ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಸೂಚನೆ
Published on

ಹಾಸನ: ಜಿಲ್ಲೆಯಲ್ಲಿ ಇದೀಗ ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕಲುಷಿತ ನೀರು ಕುಡಿಯುವ ನೀರಿಗೆ ಸೇರ್ಪಡೆಯಾಗುವ ಸಾಧ್ಯತೆ ಇರುತ್ತದೆ. ಈ ನೀರು ಸೇವನೆಯಿಂದ ಕಾಲರಾ, ಶೀತ- ಜ್ವರ, ಕೆಮ್ಮು, ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳು, ಡಾಬಾ, ಸ್ವೀಟ್ ಸ್ಟಾಲ್, ಬೇಕರಿ, ಚಾಟ್ಸ್, ಮೆಸ್, ಕ್ಯಾಂಟೀನ್, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪದವರು, ಪೇಯಿಂಗ್ ಗೆಸ್ಟ್, ಹೋಮ್-ಸ್ಟೇ, ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ರೆಸಾರ್ಟ್, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ, ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯ ಮತ್ತು ಎಲ್ಲಾ ಆಹಾರ ತಯಾರಿಕಾದಾರರು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಗ್ರಾಹಕರಿಗೆ ಕುದಿಸಿದ ಶುದ್ಧವಾದ ನೀರನ್ನು ನೀಡುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸೂಚಿಸಿದೆ
ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವಂತೆ, ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಮತ್ತು ತಯಾರಿಸಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿಟ್ಟು ಸ್ವಚ್ಛ ವಿಧಾನದ ಮೂಲಕ ತಯಾರಿಕೆ ಮತ್ತು ವಿತರಣೆಯನ್ನು ಮಾಡುವಂತೆ ಈ ಮೂಲಕ ತಿಳಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ತಪಾಸಣೆ ಸಂದರ್ಭದಲ್ಲಿ ಕೆಲವು ಕಲ್ಯಾಣ ಮಂಟಪಗಳ ಕುಡಿಯುವ ನೀರು ಹಾಗೂ ಆಹಾರ ಮಾದರಿಗಳನ್ನು ನೋಂದಾಯಿತ ಪ್ರಯೋಗಾಲಯಗಳಿಗೆ ಸೂಕ್ಷ್ಮಾಣು ವಿಶ್ಲೇಷಣೆ ಕಳುಹಿಸಲಾಗಿದ್ದು, ಕೆಲವು ಕಲ್ಯಾಣ ಮಂಟಪಗಳ ನೀರು ಕುಡಿಯಲು ಯೋಗ್ಯವಿಲ್ಲವೆಂಬುದಾಗಿ ವರದಿ ಬಂದಿದೆ.
ಆದ್ದರಿಂದ ಎಲ್ಲಾ ಆಹಾರ ತಯಾರಿಕಾದಾರರು, ಆಹಾರ ತಯಾರಿಕೆಯ ಎಲ್ಲಾ ಹಂತಗಳಲ್ಲಿ ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಆಹಾರ ತಯಾರಿಕೆಗೆ ಬಳಸುವ ನೀರನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ನೋಂದಾಯಿತವಾಗಿರುವ ಪ್ರಯೋಗಾಲಯಗಳಿಗೆ ಪ್ರತಿ ಆರು ತಿಂಗಳಿಗೆ ವಿಶ್ಲೇಷಣೆಗಾಗಿ ಕಳುಹಿಸಲು ಸೂಚಿಸಿದೆ.
ಮೇಲೆ ತಿಳಿಸಲಾದ ಎಲ್ಲಾ ವರ್ಗದವರು ಕಡ್ಡಾಯವಾಗಿ ಆಹಾರ ನೋಂದಣಿ, ಪರವಾನಗಿಯನ್ನು ಪಡೆಯುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟಿಸ್ ಮತ್ತು ದಂಡವನ್ನು ವಿಧಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net