ಗುಣಮಟ್ಟದ ಆಹಾರ ಪದಾರ್ಥ ವಿತರಿಸಲಿ

02rajesh2
Published on

ಚಾಮರಾಜನಗರ: ಅರಣ್ಯವಾಸಿಗಳಿಗೆ ಪೂರೈಸುವ ಪೌಷ್ಠಿಕ ಆಹಾರದಲ್ಲಿ ಕಳೆದ ತಿಂಗಳು ಕೆಲವು ಕಳಪೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗಿದ್ದು, ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವಂತೆ ಗಿರಿಜನರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ವಾಸಮಾಡುತ್ತಿರುವ 8159 ಕುಟುಂಬಗಳಿಗೆ ರಾಜ್ಯ ಸರ್ಕಾರವು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಪೌಷ್ಠಿಕ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ಅಕ್ಕಿ, ರಾಗಿ, ತೊಗರಿಬೇಳೆ, ಕಡಲೆಕಾಳು, ಕಡಲೆಬೀಜ, ಹುರುಳಿ ಕಾಳು, ಅಲಸಂದೆ, ಹೆಸರು ಕಾಳು, ಸಕ್ಕರೆ ಅಥವಾ ಬೆಲ್ಲ, ಅಡಿಗೆ ಎಣ್ಣೆ, ಮೊಟ್ಟೆ ಹಾಗೂ ತುಪ್ಪವನ್ನು ವಿತರಣೆ ಮಾಡುವ ಮೂಲಕ ಗಿರಿಜನರಲ್ಲಿ ರಕ್ತ ಹೀನತೆಯಿಂದ ಬಳಲುತ್ತಿದ್ದ ಮಹಿಳೆಯರು, ಮಕ್ಕಳಿಗೆ, ಅಸಹಾಯಕ ವೃದ್ಧರಿಗೆ, ಅಂಗವಿಕಲರಿಗೆ, ಗರ್ಭಿಣಿಯರಿಗೆ ಇದು ಅನುಕೂಲವಾಗಿದೆ.

ಆದರೇ ಕಳೆದ ತಿಂಗಳು ವಿತರಣೆ ಮಾಡಿದ್ದ ಪೌಷ್ಠಿಕ ಆಹಾರದಲ್ಲಿ ಅಡುಗೆ ಎಣ್ಣೆ ಹಾಗೂ ಇನ್ನಿತರೆ ಸಾಮಗ್ರಿಗಳು ಕಳಪೆಯಿಂದ ಕೂಡಿತ್ತು. ಈ ಮೊದಲು ಜಿಲ್ಲಾ ಮಟ್ಟದಲ್ಲೇ ಆಹಾರ ಪದಾರ್ಥ ನೀಡಲು ಟೆಂಡರ್ ಕರೆಯಲಾಗುತ್ತಿತ್ತು. ಆದರೇ ಪ್ರಸ್ತುತ ರಾಜ್ಯಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತಿರುವುದರಿಂದ ಇಂತಹ ಪರಿಸ್ಥಿತಿ ಉಂಟಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಗಿರಿಜನ ಮುಖಂಡರು ಹಾಗೂ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

*ಜಿಲ್ಲಾ ಮಟ್ಟದಲ್ಲೇ ಟೆಂಡರ್ ಕರೆಯಲಿ

ಗಿರಿಜನರಿಗೆ ಪೌಷ್ಟಿಕ ಆಹಾರ ಪದಾರ್ಥ ನೀಡಲು ಈ ಹಿಂದೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ನೀಡಲಾಗುತ್ತಿತ್ತು. ಆದರೆ ಈಗ ರಾಜ್ಯ ಮಟ್ಟದಲ್ಲಿ ಟೆಂಡರ್ ನೀಡುತ್ತಿರುವುದರಿಂದ ಆಹಾರ ಪದಾರ್ಥಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಳಪೆ ಆಹಾರ ಪದಾರ್ಥ ನೀಡುವುದಕ್ಕೆ ಎಡೆಮಾಡಿ ಕೊಟ್ಟಂತಾಗಿದೆ. ಆದ್ದರಿಂದ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಜಿಲ್ಲಾಮಟ್ಟದಲ್ಲಿ ಟೆಂಡರ್ ನೀಡಬೇಕು. ಇಲ್ಲವೇ ನೀಡುವ ಆಹಾರ ಪದಾರ್ಥಗಳು ಪ್ರತಿ ತಿಂಗಳು ಪರಿಶೀಲನೆಯಾಗಬೇಕು. ಇದು ಮರುಕಳಿಸದಂತೆ ಕ್ರಮ ವಹಿಸಬೇಕು.

ಮುತ್ತಯ್ಯ, ಸಂಚಾಲಕ, ಆದಿವಾಸಿ ಬುಡಕಟ್ಟು ವೇದಿಕೆ, ಹನೂರು

*ಅಡಿಗೆ ಎಣ್ಣೆ ಕಳಪೆ

ಗಿರಿಜನರಲ್ಲಿ ಪೌಷ್ಟಿಕತೆಯನ್ನು ಉತ್ತಮಪಡಿಸಲು ಸರ್ಕಾರ ಪ್ರತಿ ತಿಂಗಳು ಆಹಾರ ಪದಾರ್ಥಗಳನ್ನು ನೀಡುತ್ತಿದೆ. ಬಹುತೇಕ ಗಿರಿಜನರು ಸರ್ಕಾರ ನೀಡುವ ಆಹಾರ ಪದಾರ್ಥವನ್ನೇ ನಂಬಿಕೊಂಡಿದ್ದಾರೆ. ಆದರೆ ಕಳೆದ ತಿಂಗಳು ಗಿರಿಜನರಿಗೆ ನೀಡಿರುವ ಅಡುಗೆ ಎಣ್ಣೆ ಕಳಪೆಯಿಂದ ಕೂಡಿದ್ದು, ಹಿಂತಿರುಗಿಸಲಾಗಿದೆ. ಇದರಿಂದ ಅಡುಗೆ ಎಣ್ಣೆಯನ್ನು ಅಂಗಡಿಯಲ್ಲಿ ಖರೀದಿಸಬೇಕಾಯಿತು. ಆದ್ದರಿಂದ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಳಪೆ ಆಹಾರ ಪದಾರ್ಥ ವಿತರಣೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು.

ಭಾಗ್ಯಲತಾ, ಗ್ರಾಮ ಪಂಚಾಯಿತಿ, ಸದಸ್ಯೆ, ಮಾವತ್ತೂರು, ಹನೂರು

*ಪೌಷ್ಠಿಕ ಆಹಾರವನ್ನೇ ನಂಬಿಕೊಂಡಿದ್ದೇವೆ

ಕಾಡಿನೊಳಗೆ ತೆರಳಿ ಜೇನು ಅಳಿದು ಸಂಪಾದಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಕೃಷಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಕೂಲಿ ಕೆಲಸ ಯಾವಾಗಲೂ ಸಿಗುವುದಿಲ್ಲ. ಆಗಾಗಿ ಸರ್ಕಾರ ನೀಡುವ ಪೌಷ್ಠಿಕ ಆಹಾರವನ್ನೇ ನಂಬಿದ್ದೇವೆ. ಇತ್ತೀಚೆಗೆ ಅದರ ಗುಣಮಟ್ಟ ಕಡಿಮೆಯಾಗಿದೆ. ಈ ತಿಂಗಳ ಎಣ್ಣೆ ಕಳಪೆಯಿಂದ ಕೂಡಿದ್ದು, ಮೊಟ್ಟೆಯನ್ನು ನೀಡಿಲ್ಲ. ಕೂಲಿ ಮಾಡಿಕೊಂಡು ಜೀವನ ಸಾಗಿಸುವ ನಮಗೆ ಉತ್ತಮವಾದ ಆಹಾರ ಪದಾ ರ್ಥಗಳನ್ನು ನೀಡಬೇಕು.

ಜಡಯ, ಕರಳಕಟ್ಟೆ ಮುಖಂಡ, ಕೊಳ್ಳೇಗಾಲ

*ಏಜೆನ್ಸಿ ವಿರುದ್ಧ ಕ್ರಮವಹಿಸಿ

ಸರ್ಕಾರವು ಪ್ರತಿ ತಿಂಗಳು ಸೋಲಿಗ ಕುಟುಂಬಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಇದನ್ನು ಸರಬರಾಜು ಮಾಡುವ ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ವಹಿಸಬೇಕು. ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಸ್ಥಳೀಯ ಹಂತದಲ್ಲೇ ನೀಡುವ ಮೂಲಕ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಇಲ್ಲವಾದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಹೋರಾಟಗಳನ್ನು ಮಾಡಬೇಕಾಗುತ್ತದೆ.

ರಾಮು, ಬಿಳಿಗಿರಿರಂಗನ ಬೆಟ್ಟ, ಯಳಂದೂರು

*ಕಳಪೆ ಪದಾರ್ಥಗಳನ್ನು ಹಿಂದಿರುಗಿಸಲಾಗಿದೆ

ಸೋಲಿಗರ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುತ್ತಿರುವ ಆಹಾರ ಪದಾರ್ಥಗಳಾದ ಅಡುಗೆ ಎಣ್ಣೆ, ಮೊಟ್ಟೆ, ರಾಗಿ, ಬೆಳೆ ಸೇರಿದಂತೆ ಇತರೆ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಆಗಾಗಿ ಗುಣಮಟ್ಟದ ಕೊರತೆಯಿಂದ ಸಾಮಾಗ್ರಿಗಳನ್ನು ಹಿಂದಿರುಗಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಲಾಗಿದೆ. ಆದ್ದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಗುಣಮಟ್ಟದ ಪದಾರ್ಥಗಳು ವಿತರಣೆ ಮಾಡಲು ಮುಂದಾಗಬೇಕಾಗಿದೆ.

ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಯಳಂದೂರು

*ಲ್ಯಾಬ್‌ನಿಂದ ವರದಿ ಬರಬೇಕಿದೆ

ಜಿಲ್ಲೆಯಲ್ಲಿ ಗಿರಿಜನರಿಗೆ ವಿತರಣೆ ಮಾಡಲಾದ ಆಹಾರ ಪದಾರ್ಥಗಳಲ್ಲಿ ಅಡುಗೆ ಎಣ್ಣೆಯನ್ನು ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಕಳಪೆ ಎಂದು ಆರೋಪ ಬಂದ ಹಿನ್ನೆಲೆಯಲ್ಲಿ ವಿತರಣೆ ಮಾಡುವುದನ್ನು ತಡೆ ಹಿಡಿಯಲಾಗಿದೆ. ಈ ಹಿಂದೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತಿತ್ತು. ಆದರೇ ಈಗ ರಾಜ್ಯಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಲ್ಯಾಬ್ ವರದಿ ಬಂದ ನಂತರ ರಾಜ್ಯಮಟ್ಟದ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತೇವೆ.

ಬಿಂದ್ಯಾ, ಉಪನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಾಮರಾಜನಗರ

*ಪ್ರಾಮಾಣಿಕತೆಯಿಂದ ಆಹಾರ ವಿತರಿಸಿ

ರಾಜ್ಯಮಟ್ಟದಲ್ಲೇ ಆಹಾರ ಪದಾರ್ಥ ವಿತರಣೆಗೆ ಟೆಂಡರ್ ಕರೆದಿದ್ದು, ಅಲ್ಲಿಂದಲೇ ಆಹಾರ ಪದಾರ್ಥಗಳು ವಿತರಣೆಯಾಗಿದೆ. ಆದರೂ ಕಳಪೆ ಆಹಾರ ಪದಾರ್ಥಗಳು ವಿತರಣೆ ಆಗಿರುವುದರಿಂದ ಗಿರಿಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪೌಷ್ಠಿಕ ಆಹಾರವನ್ನು ಕೊಡುವುದರಲ್ಲೂ ಕಳಪೆಯಾದರೇ, ಯಾರಿಗೆ ಹೇಳಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಗಮನಹರಿಸಿ ಪ್ರಾಮಾಣಿಕವಾಗಿ ಗುಣಮಟ್ಟದ ಆಹಾರವನ್ನು ವಿತರಣೆ ಮಾಡಬೇಕು. ಇದು ಮರುಕಳಿಸದಂತೆ ನೋಡಿಕೊಳ್ಳಬೇಕು.

ನಾಗೇಂದ್ರ, ಮುಖಂಡ, ಗಾಣಿಗಮಂಗಲ, ಹನೂರು

*ಅನಾರೋಗ್ಯಕ್ಕೆ ತುತ್ತಾಗಿದ್ದರು

ಕಳೆದ ತಿಂಗಳು ವಿತರಣೆ ಮಾಡಿರುವ ಪೌಷ್ಠಿಕ ಆಹಾರ ಪದಾರ್ಥಗಳಲ್ಲಿ ಅಡುಗೆ ಎಣ್ಣೆ ಕಳಪೆಯಾಗಿದ್ದು, ಅದನ್ನು ಉಪಯೋಗಿಸಿದ ಗಿರಿಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳು ಎಣ್ಣೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಏನನ್ನೂ ಅರಿಯದ ಗಿರಿಜನರಿಗೆ ಈಗೇ ಮಾಡಬಾರದು. ಮುಂದಿನ ದಿನಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವಂತೆ ಅಧಿಕಾರಿಗಳು ಕ್ರಮವಹಿಸಬೇಕು.

ಡಾ.ರತ್ನಮ್ಮ, ಸೋಲಿಗ ಮುಖಂಡರು, ಗುಂಡ್ಲುಪೇಟೆ

*ಗುಣಮಟ್ಟ ಪರೀಕ್ಷೆ ಕಡ್ಡಾಯಗೊಳಿಸಿ

ಜಿಲ್ಲೆಯಲ್ಲಿರುವ ಗಿರಿಜನರಿಗೆ ಇತ್ತೀಚಿನ ದಿನಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಕಳೆದ ತಿಂಗಳು ವಿತರಣೆ ಮಾಡಿದ ಆಹಾರ ಪದಾರ್ಥಗಳಲ್ಲಿ ಅಡುಗೆ ಎಣ್ಣೆಯನ್ನು ಬಳಸಿದ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಬಳಿಕ ಇದರ ಬಳಕೆಯನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಗಿರಿಜನರಿಗೆ ನೀಡುವ ಪೌಷ್ಠಿಕ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷಿಸಿ ವಿತರಣೆ ಮಾಡಬೇಕಿದೆ.

ನಾಗಮ್ಮ, ಆದಿವಾಸಿ ಮಹಿಳೆ, ಕಾರೇಮಾಳ, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net