ಗುಣಮಟ್ಟ ವಿದ್ಯುತ್ ಪೂರೈಕೆಗೆ ಪಟ್ಟು

CTD 14 STRIKE-RITA--03
Published on


ಚಿತ್ರದುರ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಕಾರ‌್ಯಕರ್ತರು ಬೆಸ್ಕಾಂ ಕಾರ‌್ಯನಿರ್ವಾಹಕ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ಈರುಳ್ಳಿ, ಮೆಕ್ಕೆಜೋಳ, ಹಣ್ಣು, ಹೂವು, ತರಕಾರಿ ಬೆಳೆ ಹಾಳಾಗುತ್ತಿದ್ದು, ನುಸಿ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಕೂಡಲೇ ತನ್ನ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ 3 ವರ್ಷಗಳಿಂದ ಈರುಳ್ಳಿ ಮತ್ತಿತರ ಬೆಳೆಗಳು ನಿರಂತರ ಹಾಳಾಗುತ್ತಿವೆ. ಸಾಲಬಾಧೆ ತಾಳದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಸಾಲ ಮಾಡಿ ಬಿತ್ತಿರುವ ಈರುಳ್ಳಿ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಅಕ್ರಮ-ಸಕ್ರಮದಡಿ ಹಣ ಪಾವತಿಸಿರುವ ರೈತರಿಗೆ ಪೂರಕ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್-ಆಧಾರ್ ಜೋಡಣೆ ಕೈಬಿಡದಿದ್ದರೆ ಮೀಟರ್‌ಗಳನ್ನು ಕಚೇರಿ ಎದುರು ಬಿಸಾಡುತ್ತೇವೆ ಎಂದು ಎಚ್ಚರಿಸಿದ ಪ್ರತಿಭಟನಾಕಾರರು, ಹಗಲಿನಲ್ಲಿ 8 ಗಂಟೆ ಗುಣಮಟ್ಟದ ವಿದ್ಯುತ್‌ನ್ನು ಪೂರೈಸಬೇಕೆಂದು ಅಗ್ರಹಿಸಿದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಡಿಎಸ್‌ಹಳ್ಳಿ ಮಲ್ಲಿಕಾರ್ಜುನ, ರಾಮರೆಡ್ಡಿ, ಇ.ಎನ್.ಲಕ್ಷ್ಮೀಕಾಂತ್ ಲಿಂಗಾವರಹಟ್ಟಿ, ಮಂಜುನಾಥ್, ರಾಜಶೇಖರಪ್ಪ, ಕಾಂತರಾಜ್, ಸಿದ್ದಣ್ಣ, ತೋಪರಮಾಳಿಗೆ ಸುರೇಶ್‌ರೆಡ್ಡಿ, ಕಸವರಹಟ್ಟಿ ಮಾರುತೇಶ್ ರೆಡ್ಡಿ, ಚಿದಾನಂದರೆಡ್ಡಿ, ಕಲ್ಲೇಶ್, ಆರ್.ಆರ್.ಮಾರುತಿ, ಟಿ.ಚೇತನ್, ಜಗನ್ನಾಥ, ಸದಾಶಿವಪ್ಪ, ಸಿ.ಸತೀಶ್, ಎಸ್.ಪ್ರವೀಣ, ಗುರುಸಿದ್ದಪ್ಪ ಜೆ.ಎನ್.ಕೋಟೆ, ಜೋಡಿಚಿಕ್ಕೇನಹಳ್ಳಿ ಕೃಷ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net