

ಧಾರವಾಡ: ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಕರೊನಾ ಪ್ರಕರಣಗಳ ಸಂಖ್ಯೆ 200 ಗಡಿ ದಾಟುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದ್ದರೆ, ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿರುವುದು ಕೊಂಚ ಸಮಾಧಾನದ ಸಂಗತಿಯಾಗಿದೆ.
ಶನಿವಾರ 261 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 5770ಕ್ಕೇರಿದೆ. ಈವರೆಗೆ 3150 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಚೇತರಿಕೆ ಪ್ರಮಾಣ ಶೇ. 55ಕ್ಕಿಂತ ಜಾಸ್ತಿ ಇದೆ.
2433 ಪ್ರಕರಣಗಳು ಸಕ್ರಿಯವಾಗಿವೆ. 45 ಜನ ತೀವ್ರ ನಿಗಾ ಘಟಕದಲ್ಲಿ ಉಪಚಾರ ಪಡೆಯುತ್ತಿದ್ದಾರೆ. ಶನಿವಾರದ 6 ಜನ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸಾವಿನ ಪ್ರಮಾಣ 187ಕ್ಕೆ ಏರಿದೆ.
ಶನಿವಾರದ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲೂ ಹುಬ್ಬಳ್ಳಿ ತಾಲೂಕಿನದೇ ಸಿಂಹಪಾಲು ಇದೆ. ಹುಬ್ಬಳ್ಳಿ ಶಹರ ತಾಲೂಕಿನ ಒಟ್ಟು 44 ಪ್ರದೇಶಗಳಲ್ಲಿ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೆಲವು ಏರಿಯಾದಲ್ಲಿ ಒಂದಕ್ಕಿಂತ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ.ಧಾರವಾಡ ನಗರ ಮತ್ತು ತಾಲೂಕಿನ ಗ್ರಾಮಾಂತರ ಸೇರಿ 32 ಸ್ಥಳಗಳಲ್ಲಿ ಕರೊನಾ ತಗುಲಿರುವವರು ಪತ್ತೆಯಾಗಿದ್ದಾರೆ. ಕೆಲವು ಪ್ರದೇಶಗಳಲ್ಲಿ ಹೆಚ್ಚು ಕಡಿಮೆ ನಿತ್ಯವೂ ಕೋವಿಡ್ ಸೋಂಕು ಕಂಡುಬರುತ್ತಿದೆ.
ಕಲಘಟಗಿ ತಾಲೂಕಿನ ಮಿಶ್ರಿಕೋಟಿ, ಉಗ್ನಿಕೇರಿ, ದುಮ್ಮವಾಡ, ದುಲಕಿಕೊಪ್ಪ, ದಾಸ್ತಿಕೊಪ್ಪ; ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಹಿರೇಮಠ ಓಣಿ, ರಾಮಾಪುರ, ಬ್ರಹ್ಮಲಿಂಗೇಶ್ವರ ನಗರ, ಕಾಳಿದಾಸ ನಗರ, ಯರಗುಪ್ಪಿ ಪೊಲೀಸ್ ವಸತಿಗೃಹ, ತರ್ಲಘಟ್ಟ, ಹಿರೇಹರಕುಣಿ; ನವಲಗುಂದ ತಾಲೂಕಿನ ಬಸಾಪುರ, ಅಣ್ಣಿಗೇರಿ ಗ್ರಾಮದ ಜಾಡಗೇರ ಓಣಿ, ಗಾಣಿಗೇರ ಓಣಿ, ನವಲಗುಂದ ಓಣಿ, ಶಲವಡಿಯ ಹಸಬಿ ಓಣಿ, ಕುರುಬರ ಓಣಿ, ಬೆಳವಟಗಿ ಜಾಲಗಾರ ಓಣಿಯಲ್ಲಿ ಕರೊನಾ ಸೋಂಕಿತರು ಕಂಡುಬಂದಿದ್ದಾರೆ. ಅವರೆಲ್ಲರು ಕೋವಿಡ್ ಆಸ್ಪತ್ರೆ ಅಥವಾ ಕೇರ್ ಸೆಂಟರ್ಗೆ ದಾಖಲಿಸಲಾಗಿದೆ. ಬೇರೆ ಜಿಲ್ಲೆಗಳ ಐದಾರು ಜನರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.