ಗುಡ್ಡೆಮಾಂಸಕ್ಕಾಗಿ ಜಗಳವಾಡಿ ಜೈಲುಪಾಲಾದ..!

Published on

ಚಾಮರಾಜನಗರ: ಊರ ಯಜಮಾನರ ಮನೆ ಮುಂದಕ್ಕೆ ಹೋಗಿ ಆ ಯುವಕ ಜಗಳವಾಡಿದ್ದಾನೆ. ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಯಜಮಾನರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಕ್ಕೆ ಜೈಲು ಪಾಲಾಗಿದ್ದಾನೆ. ಈ ಗಲಾಟೆ ನಡೆದಿರೋದು ಹಣ, ಆಸ್ತಿ ಅಥವಾ ಮತ್ಯಾವುದೋ ಗಂಭೀರ ವಿಚಾರಕ್ಕಾಗಿಲ್ಲ ‘ಗುಡ್ಡೆಮಾಂಸ’ಕ್ಕಾಗಿ..!?

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಾಯಕರ ಬೀದಿಯ ಕೃಷ್ಣ(30) ಅಲಿಯಾಸ್ ಸೇಟು ಬಂಧಿತ ಆರೋಪಿ. ಈತ ಜು.20ರಂದು ರಾತ್ರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾರಮ್ಮನ ಹಬ್ಬದಲ್ಲಿ ‘ಗುಡ್ಡೆಮಾಂಸ ಕೊಟ್ಟಿಲ್ಲ’ ಅಂತ ಯಜಮಾನರಾದ ಕೆಂಪನಾಯ್ಕ, ಮಾರನಾಯ್ಕ, ಕಮಲೇಶ್ ಜತೆ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ.

ಊರಿನಲ್ಲಿ ಹಬ್ಬವಿದ್ದ ಹಿನ್ನಲೆ ಪ್ರತಿ ಮನೆಯಿಂದ ತಲಾ 300 ರೂ. ಸಂಗ್ರಹಿಸಿ ಗುಡ್ಡೆ ಮಾಂಸವನ್ನು ವಿತರಿಸಲಾಗಿತ್ತು. ಕೃಷ್ಣ ಮಾಂಸಕ್ಕೆ ಹಣ ನೀಡರಲಿಲ್ಲ. ಈ ಕಾರಣಕ್ಕಾಗಿ ಇವನಿಗೆ ಯಜಮಾನರು ಮಾಂಸ ಕೊಡಲಿಲ್ಲ. ಇದಕ್ಕೆ ಕೋಪಗೊಂಡ ಕೃಷ್ಣ ಯಜಮಾನರ ಮನೆ ಬಳಿಗೆ ತೆರಳಿ ಹಲ್ಲೆಗೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.

ಗ್ರಾಮದ ಯಜಮಾನ ಕಮಲೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net