

ಕಳಸ: ತಾಲೂಕಿನಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಹಿರೇಬೈಲು-ಬಾಳೆಹೊಳೆ ರಸ್ತೆಯ ಚನ್ನಡ್ಲು ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಶುಕ್ರವಾರ ಮಧ್ಯಾಹ್ನ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದ್ದು, ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಚನ್ನಡ್ಲು ಪ್ರದೇಶದಲ್ಲಿ 2019ರ ಮಹಾ ಮಳೆಗೆ ಗುಡ್ಡಗಳು ಕುಸಿದು ಸಾಕಷ್ಟು ಮನೆಗಳು ನೆಲಸಮವಾಗಿದ್ದವು. ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದವು. ಅಲ್ಲದೆ ಮನೆ ಕುಸಿದು ಓರ್ವ ಪ್ರಾಣ ಕಳೆದುಕೊಂಡಿದ್ದರು. ಇದರಿಂದಾಗಿ ವಾಸಕ್ಕೆ ಯೋಗ್ಯವಲ್ಲದ ಪ್ರದೇಶವೆಂದು ಜಿಲ್ಲಾಡಳಿತ ಘೋಷಣೆ ಮಾಡಿ, ಈ ಭಾಗದಲ್ಲಿ ವಾಸಿಸುತ್ತಿದ್ದ ಅನೇಕ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಜಿಲ್ಲಾಡಳಿತದ ಸ್ಥಳಾಂತರವನ್ನು ಒಪ್ಪದ ಅನೇಕ ಕುಟುಂಬಗಳು ಈಗಲೂ ಇದೇ ಪ್ರದೇಶದಲ್ಲಿ ವಾಸಿಸುತ್ತಿವೆ.
ಶುಕ್ರವಾರ ಮತ್ತೆ ಇದೇ ಪ್ರದೇಶದಲ್ಲಿ ಗುಡ್ಡ ಕುಸಿದಿರುವುದರಿಂದ 2019ರ ದುರಂತ ಮರುಕಳಿಸುವ ಮುನ್ಸೂಚನೆ ಇದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ.