ಗುಡ್ಡ ಅಗೆದು ಮನೆ ನಿರ್ಮಾಣಕ್ಕೆ ನಿಯಮಾವಳಿ; ದಕ ಜಿಲ್ಲಾಡಳಿತ ಚಿಂತನೆ

Screenshot_20240630_211413_Google
Published on

ಮಂಗಳೂರು: ಗುಡ್ಡಗಳನ್ನು ಅಗೆದು ಮನೆ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಾಕೃತಿಕ ವಿಕೋಪ ಯೋಜನೆಯಡಿ ನಿಯಮಾವಳಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ತಿಳಿಸಿದ್ದಾರೆ.
ಮೆಸ್ಕಾಂ ಕಚೇರಿಯಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ಗುಡ್ಡಗಳನ್ನು 90 ಡಿಗ್ರಿ ಕೋನದಲ್ಲಿ ಕತ್ತರಿಸಿ ಕೆಳಭಾಗದಲ್ಲಿ ಮನೆಗಳ ನಿರ್ಮಾಣ, ಲೇ ಔಟ್‌ಗಳನ್ನು ಮಾಡಿರುವುದು ಕಂಡು ಬಂದಿದೆ. ಅಂತಹ ಕಡೆಗಳಲ್ಲಿ ನೇರವಾಗಿ  ತಡೆಗೋಡೆಗಳ ನಿರ್ಮಾಣ ಮಾಡಿದರೂ ಪ್ರಯೋಜನವಾಗುವುದಿಲ್ಲ. ಇದರಿಂದಾಗಿ ಗುಡ್ಡ ಕುಸಿದು ಮನೆಗಳ ಮೇಲೆ ಬೀಳುವ ಪ್ರಕರಣಗಳು ಹೆಚ್ಚಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಕಾರ್ಯಾಚರಣೆಯನ್ನೂ ವಿಕೇಂದ್ರೀಕರಣಗೊಳಿಸಿ ಸ್ಥಳೀಯವಾಗಿ  ಕಾರ್ಯಾಚರಿಸಲು  ಸುಲಭವಾಗುವಂತೆ ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳಿಗೆ ಪೂರಕವಾಗಿ  ಒಟ್ಟು 292 ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಈ ಮೊದಲು ಜಿಲ್ಲೆಗೆ ಒಂದು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಯೋಜನೆ ಸಿದ್ಧಪಡಿಸಲಾಗುತಿತ್ತು.  ಜಿಲ್ಲಾ ಮಟ್ಟದಲ್ಲಿ ಇದು ಕಾರ್ಯಾಚರಿಸುತ್ತಿದ್ದು ಸ್ಥಳೀಯವಾಗಿ  ಸಮಸ್ಯೆಗಳನ್ನು ಇದರಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಯೋಜನೆ ವಿಕೇಂದ್ರೀಕಣಗೊಳಿಸಲಾಗಿದೆ. ಇದರಿಂದಾಗಿ ಪ್ರಾಕೃತಿಕ ವಿಕೋಪದ ಸೂಕ್ಷ್ಮ ಪ್ರದೇಶ, ಅಲ್ಲಿ ಎಷ್ಟು ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತದೆ, ಪ್ರದೇಶದ ಜನ ಸಂಖ್ಯೆ ಎಷ್ಟಿದೆ, ಪರಿಹಾರ ವ್ಯವಸ್ಥೆ ಏನು ಎನ್ನುವುದನ್ನು ಹಿಂದಿನ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಈ 292 ತಂಡಗಳು  ವರದಿ ತಯಾರಿಸಿವೆ.
ಪ್ರತಿ ತಂಡವು ಓರ್ವ ಇನ್ಸಿಡೆಂಟ್ ಕಮಾಂಡರ್ ಅನ್ನು ಹೊಂದಿದ್ದು ವಿವಿಧ  ಇಲಾಖೆಗಳ ಪ್ರತಿನಿಧಿಗಳು ಈ ತಂಡದಲ್ಲಿರುತ್ತಾರೆ. ಯಾವುದೇ ಕಾರ್ಯಾಚರಣೆ  ಸಂದರ್ಭ ಇನ್ಸಿಡೆಂಟ್ ಕಮಾಂಡರ್ ನಿರ್ದೇಶನದಂತೆ  ಕಾರ್ಯ ನಿರ್ವಹಿಸಲಾಗುತ್ತದೆ.  ಈ ತಂಡಗಳ ವರದಿ  ಆಧಾರದಲ್ಲಿ ಆಪ್ ಒಂದನ್ನು ಅಭಿವೃದ್ಧಿ ಪಡಿಸಲಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಆಪ್ ಮೂಲಕ ಕೆಲಸ ನಡೆಯುತ್ತದೆ. ರಕ್ಷಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಬೇಕಾದ ವಸ್ತು, ಸಲಕರಣೆಗಳನ್ನು ಪೂರೈಸಲಾಗುತ್ತದೆ. ಈಜುಗಾರರು, ಮುಳುಗು ತಜ್ಞರು, ಆಶಾ ಕಾರ್ಯಕರ್ತೆಯರೂ ಈ ಯೋಜನೆಯಡಿ ಕಾರ್ಯನಿರ್ವಹಿಸುತ್ತಾರೆ ಎಂದರು.
ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ, ಅಧಿಕಾರಿಗಳಿಗೆ ಬರುವ ಕರೆ, ವಾಟ್ಸಾಪ್ ಸಂದೇಶಗಳನ್ನು ಆಪ್ ಮೂಲಕ ಇನ್ಸಿಡೆಂಟ್‌ಕಮಾಂಡರ್‌ಗೆ ವರ್ಗಾಯಿಸಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಪರಿಶೀಲಿಸಿ, ಸೂಕ್ತ ವ್ಯವಸ್ಥೆ ಮಾಡಿ ದೂರಿನ ವಿಲೇವಾರಿ ಮಾಡಬೇಕು. ಈ ಕೆಲಸ ಈಗಾಗಲೇ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಜನರು ದೂರುಗಳು ವಾಟ್ಸಾಪ್‌ನಿಂದ ನೇರವಾಗಿ ಆಪ್‌ಗೆ ಬರುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net