ಗುಡುಗು ಸಹಿತ ಬಿರುಸಿನ ಮಳೆ

07 YERRISWAMY 04
Published on

ಬಳ್ಳಾರಿ : ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಗುಡುಗು, ಸಿಡಿಲು ಸಹಿತ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು. ವಿವಿಧಡೆ ಸುರಿದ ಮಳೆಯಿಂದ ಇಲ್ಲಿನ ರಸ್ತೆ ಮೇಲಲ್ಲ ನೀರು ಹರಿದು ವಾಹನ ಸವಾರರು ಸಂಚಾರಿಸಲು ಪರದಾಡಿದರು.
ಮಳೆಯಿಂದಾಗಿ ಜಿಲ್ಲಾಧಿಕಾರಿ ಕಚೇರಿ ಆವರಣ, ಹಳೇ ತಾಲೂಕು ಕಚೇರಿ ಆವರಣ, ಶಾಲೆ, ಕಾಲೇಜುಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಂತವು. ನಗರ ಕೊಳೆಗೇರಿಗಳಲ್ಲಿ ಚರಂಡಿಗಳು ತುಂಬಿ ತ್ಯಾಜ್ಯದ ನೀರು ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ಚರಂಡಿ ನೀರನ್ನು ಮನೆಯಿಂದ ಹೊರಗೆ ಚೆಲ್ಲುವಂತಾಯಿತು. ಮಳೆ ಹಾಗೂ ಗಾಳಿಯಿಂದಾಗಿ ಇಲ್ಲಿನ ಅನಂತಪುರ ರಸ್ತೆಯ ರಾಘವ ಕಲಾಮಂದಿರದ ಮುಂಭಾಗದಲ್ಲಿನ ಬೃಹತ್ ಮರ ಧರೆಗೆ ಉರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಮಳೆ ನಿಂತ ಕೂಡಲೇ ಜೆಸ್ಕಾಂ ಸಿಬ್ಬಂದಿ ಮರ ಕಡಿದು ವಿದ್ಯುತ್ ಸಂಪರ್ಕ ಏರ್ಪಡಿಸಿದ ಬಳಿಕ ವಿದ್ಯುತ್ ಸಂಪರ್ಕ ದೊರೆಯಿತು.
ನಗರದ ದುರ್ಗಮ್ಮ ಗುಡಿಯ , ಎಸ್‌ಎನ್ ಪೇಟೆ ಹಾಗೂ ಜಿಲ್ಲಾ ಕ್ರೀಡಾಂಗಣ ರಸ್ತೆಯ ರೈಲ್ವೆ ಕೆಳ ಸೇತುವೆಗಳಲ್ಲಿ ಅಪಾರ ಪ್ರಮಾಣದ ನೀರು ತುಂಬಿ ವಾಹನ ಸವಾರರು ಸಂಚಾರಿಸಲು ಪರದಾಡಿದರು. ಎಸ್‌ಎನ್ ಪೇಟೆಯ ಮೇಲ ಸೇತುವೆ ಮೇಲೆ ಕೆಲ ಟ್ರಾಫಿಕ್ ಸಮಸ್ಯೆಯಾಯಿತು. ಇಲ್ಲಿನ ಸಿಟಿ ಬಸ್ ನಿಲ್ದಾಣ, ರಾಯಲ್ ವೃತ್ತದ ಮಹಾನಗರ ಪಾಲಿಕೆಯ ಬಲಭಾಗದಲ್ಲಿ ಹೆಚ್ಚುವರಿ ನೀರು ಹೊರಗೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ನೀರು ನಿಂತವು. ನಗರದಿಂದ ಬೇರೆ ಕಡೆಗೆ ಸಂಚಾರಿಸಬೇಕಿದ್ದ ವಿದ್ಯಾರ್ಥಿಗಳು ರಸ್ತೆಯ ಮೇಲೆ ನಿಂತರು. ಪಾಲಿಕೆಗೆ ಬಂದಿದ್ದ ಸಾರ್ವಜನಿಕರು ನೀರಿನಲ್ಲಿಯೇ ನಡೆದುಕೊಂಡು ಹೋದರು. ನಗರದ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಳೆ ಸುರಿದ ಪರಿಣಾಮ ಸಣ್ಣ ಸಣ್ಣ ಹಳ್ಳಗಳಲ್ಲಿ ತುಂಬಿ ಹರಿದವು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದ್ದು, ಹೆಸರು, ತೊಗರಿ, ಮೆಕ್ಕಜೋಳ ಬಿತ್ತನೆ ಮಾಡಿದ್ದ ರೈತರಿಗೆ ಅನುಕೂಲವಾಯಿತು. ರಾತ್ರಿಯು ಮಳೆ ಸುರಿಯುವ ಸಂಭವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net