ಗುಡಿಸಲುವಾಸಿಗಳಿಗೆ ಪರ್ಯಾಯ ವ್ಯವಸ್ಥೆ, ಜಿ.ಎಂ.ಸಿದ್ದೇಶ್ವರ ಸೂಚನೆ

dvg-smart-city-meeting-sep-13.jpg
Published on
ದಾವಣಗೆರೆ: ವರ್ತುಲ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ರಾಮಕೃಷ್ಣ ಹೆಗಡೆ ನಗರದ 350 ಗುಡಿಸಲುವಾಸಿಗಳಿಗೆ ಬೇರೆಡೆ ಸೂಕ್ತ ಸ್ಥಳ ಗುರುತಿಸಿ, ಹಕ್ಕುಪತ್ರ ನೀಡಿ ಜಾಗ ತೆರವುಗೊಳಿಸಬೇಕೆಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.
ನಗರದ ಸ್ಮಾರ್ಟ್‌ಸಿಟಿ ಸಿಟಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ಮಾರ್ಟ್‌ಸಿಟಿ ಯೋಜನೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಿಂಗ್ ರಸ್ತೆ ನಿರ್ಮಾಣ ಬಹುದಿನದಿಂದ ನನೆಗುದಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಶಾಮನೂರು ರಸ್ತೆಯಿಂದ ಸಂಗೊಳ್ಳಿರಾಯಣ್ಣ ವೃತ್ತ, ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಅಕ್ತರ್ ರಜ್ಹಾ ವೃತ್ತದಿಂದ ಮಾಗಾನಹಳ್ಳಿ ರಸ್ತೆ ಸಂಪರ್ಕಿಸುವ ವರ್ತುಲ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ. ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸೂಚಿಸಿದರು. ರಾಜನಹಳ್ಳಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬ್ಯಾರೇಜ್ ಕಾಮಗಾರಿಯನ್ನು ನದಿ ನೀರು ಹರಿಯುವಿಕೆಯ ಪ್ರಮಾಣ ತಗ್ಗಿದ ನಂತರ ಕೈಗೆತ್ತಿಕೊಂಡು ಏಪ್ರಿಲ್ ಒಳಗಾಗಿ ಪೂರ್ಣಗೊಳಿಸಬೇಕು. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಕಾರ್ಯೋನ್ಮುಖರಾಗಬೇಕು. ದಿಶಾ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಶಾಲಾ ಕಟ್ಟಡ, ಕೆಎಸ್‌ಆರ್‌ಟಿಸಿ ಮತ್ತು ಬೇತೂರು ಬಸ್ ನಿಲ್ದಾಣ, ರಸ್ತೆ ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಬೇಕು. ವಿಶೇಷವಾಗಿ ಯರಗುಂಟೆ, ಬಸಾಪುರಗಳಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಗಳ ಕುರಿತಂತೆ ದೂರುಗಳಿದ್ದು, ಖುದ್ದಾಗಿ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು ಎಂದರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಬಸಾಪುರ ಶಾಲೆಯ ಶೌಚಗೃಹ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥ ಪರಿಶೀಲಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ಪಿಪಿಪಿ ಮಾದರಿಯ 5 ಸೇರಿ ಒಟ್ಟು 115 ಕಾಮಗಾರಿಗಳು ನಡೆಯುತ್ತಿವೆ. ಇದರ ಯೋಜನಾ ವೆಚ್ಚ 1073 ಕೊಟಿ ರೂ.ಗಳಾಗಿದ್ದು ಇದುವರೆಗೆ 678.99 ಕೋಟಿ ರೂ. ವ್ಯಯಿಸಲಾಗಿದೆ. 62 ಕಾಮಗಾರಿ ಪೂರ್ಣಗೊಮಡಿದ್ದು 200.59 ಕೋಟಿ ರೂ. ಪಾವತಿಸಲಾಗಿದೆ. 40 ಕಾಮಗಾರಿ ಪ್ರಗತಿಯಲ್ಲಿವೆ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದರು. ಸಭೆಯಲ್ಲಿ ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ದಿಶಾ ಸಮಿತಿಯ ಸದಸ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net