ಗುಡಿಸಲು ವಾಸಿಗಳಿಗೆ ಶೀಘ್ರವೇ ನಿವೇಶನ

4blrp4
ಚಿತ್ರ:4(ಬಿಎಲ್‌ಆರ್)4-ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿರುವ ಗುಡಿಸಲು ವಾಸಿಗರೊಂದಿಗೆ ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಚರ್ಚಿಸಿದರು.
Published on

ಬೇಲೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗುಡಿಸಲಲ್ಲಿ ವಾಸಿಸುತ್ತಿರುವವರೆಗೆ ಬದಲಿ ನಿವೇಶನ ನೀಡದೆ ಇಲ್ಲಿಂದ ಕಳುಹಿಸುವುದಿಲ್ಲ. ಆದರೆ ನೀವು ವಿದ್ಯಾರ್ಥಿಗಳೊಂದಿಗೆ ಘರ್ಷಣೆಗೆ ಇಳಿಯದೆ, ಪ್ರತಿಭಟನೆ ಮಾಡದೆ, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಜತೆಗೆ ಹೊಸದಾಗಿ ಗೋಡೆ ಕಟ್ಟುವುದು, ದುರಸ್ತಿಪಡಿಸುವುದನ್ನು ಮಾಡಬಾರದು ಎಂದು ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಸೂಚಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಹಿಂಭಾಗದ ಗುಡಿಸಲು ವಾಸಿಗಳನ್ನು ಮಂಗಳವಾರ ರಾತ್ರಿ ಭೇಟಿ ಮಾಡಿ ಮಾತನಾಡಿ, ಕಳೆದ 40 ವರ್ಷದಿಂದ ಗುಡಿಸಲು ವಾಸಿಗಳ ಸಮಸ್ಯೆ ಇದೆ. ಕಾಲೇಜು ಮೈದಾನದಲ್ಲಿರುವ ನಿವಾಸಿಗಳಿಗೆ, ಪುರಸಭೆಯಿಂದ ಶೀಘ್ರ ನಿವೇಶನ ನೀಡಲಾಗುವುದು. ಬಂಟೇನಹಳ್ಳಿ ಸಮೀಪ ನಿವೇಶನ ನೀಡಲು ಮುಂದಾದ ಸಂದರ್ಭ ಕಾನೂನು ತೊಡಕಿನಿಂದ ಹಂಚಿಕೆ ಸಾಧ್ಯವಾಗಿಲ್ಲ. ನಾನು ಅಧ್ಯಕ್ಷನಾದ ನಂತರ ನೆಟ್ಟೆಕೆರೆ ಸಮೀಪ 5 ಎಕರೆ ಸರ್ಕಾರಿ ಭೂಮಿಯನ್ನು ಪುರಸಭೆ ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಭೂಮಿಯಲ್ಲಿ ಗುಡಿಸಲು ವಾಸಿಗಳಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗುಡಿಸಲುವಾಸಿ ಗಂಗಾಧರ್ ಮಾತನಾಡಿ, ನಮಗೆ ಬದಲಿ ನಿವೇಶನ ನೀಡುವವರೆಗೂ ಇಲ್ಲಿ ವಾಸಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಓಡಾಡಲು ಇರುವ ರಸ್ತೆಗೆ ತಡೆಗೋಡೆ ಕಟ್ಟಬಾರದು ಎಂದು ಸೂಚಿಸಿದರು.

ನಿವಾಸಿಗಳಾದ ರಮೇಶ್, ಶಂಕರ್, ಲೋಕೇಶ್, ನಾಗರಾಜು, ಭಾಗ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net