

ಎನ್.ವಿ.ವೆಂಕಟೇಶ್, ಗುಡಿಬಂಡೆ
ಸರ್ಕಾರದ ಎಲ್ಲ ಯೋಜನೆಗಳಿಗೆ ಹಾಗೂ ಸೌಲಭ್ಯಗಳಿಗೆ ಆಧಾರ್‌ಕಾರ್ಡ್ ಕಡ್ಡಾಯವಾಗಿದ್ದು, ತಾಲೂಕು ಕೇಂದ್ರಗಳಲ್ಲಿ ಸೂಕ್ತ ಆಧಾರ್ ನೋಂದಣಿ ಕೇಂದ್ರವಿಲ್ಲದೆ ಜನಸಾಮಾನ್ಯರು ಪರದಾಡುವ ಸ್ಥಿತಿ ಎದುರಾಗಿದೆ.
ಕೆಲ ತಿಂಗಳ ಹಿಂದೆ ಪಟ್ಟಣದ ಗ್ರಾಮೀಣ ಬ್ಯಾಂಕ್‌ನಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಸೇರಿ ಇತರ ಸೇವೆ ನೀಡಲಾಗುತ್ತಿತ್ತು. ಆದರೆ, ಕೆಲ ಕಾರಣಗಳಿಂದ ಈ ಸೇವೆಯೂ ಸ್ಥಗಿತಗೊಂಡಿದೆ. ನಂತರ ಸಾರ್ವಜನಿಕರ ಒತ್ತಡದ ಮೇರೆಗೆ ತಾಲೂಕು ಕಚೇರಿಯಲ್ಲಿ ಆಧಾರ್ ನೋಂದಣಿಗೆ ಪ್ರತ್ಯೇಕ ಕೌಂಟರ್ ತೆರೆದು ಸೇವೆ ನೀಡಲಾಗುತ್ತಿತ್ತು. ಇದು ಕೂಡ ಕಳೆದ 5 ತಿಂಗಳಿಂದ ಕಾರ್ಯ ಸ್ಥಗಿತಗೊಳಿಸಿದೆ. ತಾಲೂಕಿನಲಿ ್ಲಎಲ್ಲೂ ಆಧಾರ್ ನೋಂದಣಿ ಕೇಂದ್ರಗಳಿಲ್ಲದೇ ಜನಸಾಮಾನ್ಯರು ನೋಂದಣಿ, ಹೆಸರು, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಸೇರಿ ಇತರ ತಿದ್ದುಪಡಿ ಮಾಡಿಸಲು ಬೇರೆ ತಾಲೂಕು ಕೇಂದ್ರಗಳಿಗೆ ಹೋಗಿ ಬರಬೇಕಿದೆ. ಇದರಿಂದ ಹಣ, ಸಮಯ ಎರಡೂ ವ್ಯರ್ಥವಾಗುತ್ತಿದೆ. ಕೂಡಲೇ ಗುಡಿಬಂಡೆಯ ತಾಲೂಕು ಕಚೇರಿಯಲ್ಲಿಯೇ ಆಧಾರ್ ಕೇಂದ್ರ ಮರು ಆರಂಭಿಸುವಂತೆ ಜನತೆ ಒತ್ತಾಯಿಸಿದ್ದಾರೆ.
ಆಧಾರ್ ಕಡ್ಡಾಯ
ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಕಾರ್ಯವಾಗಲೀ, ಸೌಲಭ್ಯ ಪಡೆಯಲಾಗಲೀ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅದಕ್ಕೆ ಒಟಿಪಿ ಪಡೆಯಲು ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕಿದೆ. ಆದರೆ, ತಾಲೂಕಿನಲ್ಲಿ ಆಧಾರ್ ಕೇಂದ್ರ ಸ್ಥಗಿತಗೊಂಡಿರುವುದರಿಂದ ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಲು ಆಗದೇ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಜನರು ಪರದಾಡುವಂತಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ತಾಲೂಕು ಕೇಂದ್ರದಲ್ಲಿ ಆಧಾರ್ ಕೇಂದ್ರ ಪ್ರಾರಂಭಿಸಬೇಕೆಂದು ಪಟ್ಟಣದ ಜನತೆ ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರದಲ್ಲಿ ಆಧಾರ್ ನೋಂದಣಿ ಕೇಂದ್ರವಿಲ್ಲದೇ ಜನತೆ ಪರದಾಡುತ್ತಿದ್ದಾರೆ. ಈಗಂತೂ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಡ್ಡಾಯ ಮಾಡಲಾಗಿದೆ. ಆದರೆ, ಹೆಸರು ತಿದ್ದುಪಡಿ, ಜನ್ಮದಿನಾಂಕ, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ಸೇರಿಸಲು ತಾಲೂಕಿನ ಜನತೆ ಇತರ ತಾಲೂಕು ಕೇಂದ್ರಗಳಿಗೆ ಹೋಗಬೇಕಾಗಿದೆ. ತಾಲೂಕು ಕಚೇರಿಯಲ್ಲಿರುವ ಆಧಾರ್ ನೋಂದಣಿ ಕೇಂದ್ರ ಸ್ಥಗಿತವಾಗಿದ್ದು ಪ್ರತಿದಿನ ನೂರಾರು ಜನ ಬಂದು ವಾಪಸ್ ಹೋಗುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಆಧಾರ್ ನೊಂದಣಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು. - ಉಪ್ಪಾರಹಳ್ಳಿ ಶ್ರೀನಿವಾಸ, ಗುಡಿಬಂಡೆ ತಾಲೂಕು ಕಚೇರಿಯಲ್ಲಿದ್ದ ಆಧಾರ್ ನೋಂದಣಿ ಕೇಂದ್ರದಲ್ಲಿ ಕೆಲ ತಪ್ಪು ಮಾಡಿದ್ದರಿಂದ ಅವರ ಐಡಿಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದು, ಅವರು ಕಾರ್ಯನಿರ್ವಹಿಸುತ್ತಿಲ್ಲ. ಶಾಶ್ವತವಾಗಿ ಕೇಂದ್ರ ತೆರೆಯುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು. - ಸಿಗ್ಬತ್‌ವುಲ್ಲಾ, ತಹಸೀಲ್ದಾರ್, ಗುಡಿಬಂಡೆ