

ಗುಡಿಬಂಡೆ: ರಿಯಲ್ ಎಸ್ಟೇಟ್ ಉದ್ಯಮಿಗಳ ಪರ ಕೆಲಸ ಮಾಡುತ್ತಿರುವ ತಹಸೀಲ್ದಾರ್ ಸಿಗ್ಬತ್‌ಉಲ್ಲಾ ಅವರನ್ನು ಜಿಲ್ಲಾಧಿಕಾರಿಗಳು ಕೂಡಲೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘದ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಮುಖಂಡರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಮುಖ್ಯ ಬೀದಿಗಳಲ್ಲಿ ತಹಸೀಲ್ದಾರ್ ವಿರುದ್ಧ ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು. ರೈತರು ಭೂಮಿ ದಾಖಲೆ, ಪಹಣಿ ಹಾಗೂ ಇನ್ನಿತರ ದಾಖಲೆಗಳಿಗಾಗಿ ರೈತರು ತಾಲೂಕು ಕಚೇರಿಗೆ ತೆರಳಿದರೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಆದರೆ ರಿಯಲ್ ಎಸ್ಟೇಟ್ ಉದ್ಯಮಿಗಳು ಹೋದರೆ ಕೆಲವೇ ಗಂಟೆಗಳಲ್ಲಿ ಅವರ ಕೆಲಸ ಮುಗಿಯುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಲೆಕ್ಕಿಗರು ಮಾಡುವ ಅನಾಚಾರಗಳಿಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕೂಡಲೇ ರೈತರಿಗೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವವರೆಗೂ ಅನಿರ್ದಿಷ್ಟಾವಧಿ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಿಯಲ್ ಎಸ್ಟೇಟ್ ಉದ್ಯಮಿಗಳು ಸರ್ಕಾರಿ ಜಾಗ ಕಬಳಿಸಿದ್ದರೆ ಅವರ ಮೇಲೆ ತಹಸೀಲ್ದಾರ್ ಕ್ರಮ ಜರುಗಿಸುವುದಿಲ್ಲ, ಅದೇ ಬಡ ಕೂಲಿ ಕಾರ್ಮಿಕರು ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಿದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಜಮೀನುಗಳಿಗೆ ರಸ್ತೆ ಬೇಕು ಎಂದರೆ ಯಾವುದೋ ಮಾರ್ಗ ಹುಡುಕಿ ಅವರಿಗೆ ರಸ್ತೆ ಮಾಡಿಕೊಡುತ್ತಾರೆ ಎಂದು ತಹಸೀಲ್ದಾರ್ ವಿರುದ್ಧ ರೈತ ಸಂಘದ ತಾಲೂಕು ಅಧ್ಯಕ್ಷ ಯರ‌್ರಹಳ್ಳಿ ನಾರಾಯಣಸ್ವಾಮಿ ಆರೋಪಿಸಿದರು.
ಕಂದಾಯ ಇಲಾಖೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಈ ಬಗ್ಗೆ ಆರ್‌ಟಿಐ ಅರ್ಜಿಯಲ್ಲಿ ಮಾಹಿತಿ ಕೇಳಿದರೆ ಕೊಡದೆ, ಹಿಂಬರಹ ನೀಡುತ್ತಾರೆ. ನಮೂನೆ 50, ನಮೂನೆ 53, ನಮೂನೆ-57 ರಲ್ಲಿ ರೈತರು ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ರೈತನಿಗೂ ಸಾಗುವಳಿ ಚೀಟಿ ನೀಡಬೇಕು, ಆದರೆ ತಹಸೀಲ್ದಾರ್ ಉದ್ಯಮಿಗಳಿಗೆ ಭೂ ದಾಖಲೆ ಮಾಡಿಕೊಡುತ್ತಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ಅರುಣ್ ರೆಡ್ಡಿ, ರೈತ ಮುಖಂಡರಾದ ರಾಮಿರೆಡ್ಡಿ, ಮಂಜುನಾಥ್, ನರಸಿಂಹಪ್ಪ, ಆನಂದರೆಡ್ಡಿ, ಚಿನ್ನಪ್ಪರೆಡ್ಡಿ, ಗಂಗಪ್ಪ, ರಾಮಪ್ಪ, ಶಫೀವುಲ್ಲಾ, ಬಾಬು, ಚಿಕ್ಕಪ್ಪಯ್ಯ, ವೆಂಕಟೇಶ್, ರಾಮಪ್ಪ, ಆದಿನಾರಾಯಣಪ್ಪ ಸೇರಿ ಇತರರು ಇದ್ದರು.