ಗುಡಿತುಂಬಿದ ರಾಜಮಾತೆ ಉಚ್ಚಂಗಿ ಯಲ್ಲಮ್ಮ ದೇವಿ

Ucchhangi Yallamma Devi
Published on

ಚಿತ್ರದುರ್ಗ: ರಾಜಮಾತೆ, ನಗರದೇವತೆ ಉಚ್ಚಂಗಿಯಲ್ಲಮ್ಮ ದೇವಿಯ ಉತ್ಸವ ಮೂರ್ತಿ ಗುಡಿತುಂಬುವ ಕಾರ್ಯ ಭಾನುವಾರ ನಸುಕಿನಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಶನಿವಾರ ಸಿಡಿ ಮಹೋತ್ಸವ ಸಂಪನ್ನಗೊಂಡ ಬಳಿಕ ದೇವಿಯ ಉತ್ಸವ ಮೂರ್ತಿ ಉಚ್ಚಂಗಿಯಲ್ಲಮ್ಮ ದೇವಿ ದೇಗುಲ ಅಕ್ಕ-ಪಕ್ಕ, ದೊಡ್ಡಪೇಟೆ, ಉಜ್ಜಯನಿ ಮಠ, ಕೂಡಲೀ ಶೃಂಗೇರಿ ಮಠ, ಜೋಗಿಮಟ್ಟಿ ರಸ್ತೆ ಮಾರ್ಗವಾಗಿ ಸಂಚರಿಸಿತು.

ನಂತರ ಸುಣ್ಣದಗುಮ್ಮಿ, ಮಾಸ್ತಮ್ಮ ದೇವಿ ದೇಗುಲದ ಸ್ವಾಗತ ಕಮಾನು, ಜಟ್‌ಪಟ್ ನಗರ, ಸ್ಟೇಡಿಎಂ ರಸ್ತೆ, ಪ್ರಶಾಂತ ನಗರ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್, ಕೋಟೆ ಮಾರ್ಗವಾಗಿ ಸಂಚರಿಸಿತು. ಇದೇ ವೇಳೆ ಆಯಾ ಭಾಗದ ಭಕ್ತರು ಪೂಜೆ, ಮಹಾಮಂಗಳಾರತಿ ಸೇವೆ ನೆರವೇರಿಸಿದರು. ನಂತರ ಪ್ರಸಾದ ವಿತರಿಸಿದರು. ಮಾರ್ಗದುದ್ದಕ್ಕೂ ನೀರೆರಚಿದ ಭಕ್ತರಿಂದ ಉಧೋ ಉಧೋ ಹರ್ಷೋದ್ಗಾರ ಮೊಳಗಿತು.

ದೇಗುಲದ ಬಳಿ ಬರುತ್ತಿದ್ದಂತೆ ಮೆಟ್ಟಿಲುಗಳನ್ನು ಏರುವಾಗ ಒಲ್ಲದ ಮನಸ್ಸಿನಿಂದ ಹೊರಟ ದೇವಿಯ ಉತ್ಸವ ಮೂರ್ತಿಯನ್ನು ದೇಗುಲದ ಎರಡನೇ ಮಂಟಪದತ್ತ ಕರೆತರಲಾಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ಒಂದು ವಾರದಿಂದಲೂ ಊರಾಡಿದ ದೇವಿಯ ಉತ್ಸವ ಮೂರ್ತಿಗೆ ಶಾಸ್ತ್ರ, ಸಂಪ್ರದಾಯದಂತೆ ಗಂಗಾಪೂಜೆ ನೆರವೇರಿತು.

ಬಳಿಕ ಅರ್ಚಕರು ಮೂರ್ತಿಯನ್ನು ಹೊತ್ತು ಗುಡಿಯೊಳಗೆ ಹೆಜ್ಜೆ ಹಾಕಿದರು. ಉರುಮೆಯ ನಾದ, ಮಂಗಳ ವಾದ್ಯದೊಂದಿಗೆ ಗುಡಿ ಪ್ರವೇಶಿಸಲು ಕೆಲಕಾಲ ಸತಾಯಿಸಿದ ನಂತರ ಗುಡಿತುಂಬಿದ ದೃಶ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.

ನೆರವೇರಿದ ಓಕುಳಿ ಸೇವೆ: ಉಚ್ಚಂಗೆಮ್ಮ ದೇವಿಯ ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗೆ ಭಾನುವಾರ ಬೆಳಗ್ಗೆ ಅಭಿಷೇಕ, ಜೋಗಪ್ಪ-ಜೋಗಮ್ಮರಿಂದ ರಾತ್ರಿ ಓಕುಳಿ ಸೇವೆ ಶಾಸ್ತ್ರೋಕ್ತವಾಗಿ ನೆರವೇರಿದವು. ಮೇ.28ರಂದು ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net