ಗುಡಿಕೈಗಾರಿಕೆಯಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ

8sor1
Published on

ಸೊರಬ: ಪ್ರಾಚೀನ ಇತಿಹಾಸ ಇರುವ ಆಹಾರ ಹಾಗೂ ಕರಕುಶಲ ವಸ್ತುಗಳನ್ನು ಮೇಳಗಳ ಮೂಲಕ ಇಂದಿನ ತಲೆಮಾರಿಗೆ ಪರಿಚಯಿಸಿ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ನ ಕೆಲಸ ಶ್ಲಾಘನೀಯ ಎಂದು ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್ ತವನಂದಿ ಅಭಿಪ್ರಾಯಪಟ್ಟರು. ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿ, ಯಕ್ಷ ರಂಗ, ಬಾಲನಂದನ ಟ್ರಸ್ಟ್ ಸಾಗರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಆಹಾರ ಮೇಳ ಹಾಗೂ ಕರಕುಶಲ ಮೇಳ ಉದ್ಘಾಟಿಸಿ ಮಾತನಾಡಿದರು. ಗುಡಿ ಕೈಗಾರಿಕೆಗಳು ಮತ್ತು ಕರಕುಶಲ ಕಲೆಯಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಅಡಿಪಾಯ ಒದಗಿಸುತ್ತದೆ. ಇಂತಹ ಕುಶಲಕರ್ಮಿಗಳಿಗೆ ಸರ್ಕಾರ ನೆರವು ನೀಡಬೇಕು. ಗ್ರಾಮೀಣ ಭಾಗದಲ್ಲಿ ವಿವಿಧ ಸ್ವ ಸಹಾಯ ಸಂಘಗಳು, ಸಿ ಶಕ್ತಿ ಸಂಘಗಳು ಕಲಾ ಕುಶಲ ಕಲೆಯಿಂದ ವಿವಿಧ ಬಗೆಯ ವಸ್ತುಗಳು ಮತ್ತು ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಪ್ರಗತಿ ಹೊಂದುತ್ತಿರುವುದು ಶ್ಲಾಘನೀಯ ಎಂದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕುಂಬಾರಿಕೆ, ಕಮ್ಮಾರಿಕೆ ಸೇರಿದಂತೆ ವಿವಿಧ ಕರಕುಶಲಕರ್ಮಿಗಳಿಗೆ ನೆರವು ನೀಡುವ ಉದ್ದೇಶದಿಂದ ವಿಶ್ವ ಯೋಜನೆಯನ್ನು ಜಾರಿಗೆ ತಂದು ಅವರ ಹಿತವನ್ನು ಕಾಯುವಲ್ಲಿ ಮುಂದಾಗಿದ್ದರು ಎಂದು ತಿಳಿಸಿದರು. ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಪರಂಪರಾಗತವಾಗಿ ಬಂದ ನಮ್ಮ ಗ್ರಾಮೀಣ ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ ಪದ್ಧತಿಗಳು ಜಾಗತೀಕರಣ ಮತ್ತು ಆಧುನಿಕ ಸಂಸ್ಕೃತಿಯ ಪ್ರಭಾವದಿಂದ ಬದಲಾಗುತ್ತಿವೆ. ಕಸಾಪದಿಂದ ತಾಲೂಕಿನ ಜನತೆಗೆ ಖಾದಿ ವಸ್ತು ಪ್ರದರ್ಶನ ಮತ್ತು ವಿವಿಧ ಖಾದ್ಯಗಳನ್ನು ಪರಿಚಯಿಸುವ ಕಾರ್ಯ ಮಹತ್ವ ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಯಕ್ಷರಂಗ ಟ್ರಸ್ಟ್ ಅಧ್ಯಕ್ಷ ದಿವಾಕರ ಭಾವೆ, ಪುರಸಭೆ ನಾಮನಿರ್ದೇಶಿತ ಸದಸ್ಯ ಪರಶುರಾಮ್, ಪಪಂ ಮಾಜಿ ಉಪಾಧ್ಯಕ್ಷೆ ರತ್ನಮ್ಮ, ಸಾಗರ ಬಾಲನಂದನ ಟ್ರಸ್ಟ್‌ನ ರವೀಂದ್ರ ಕಾಶಿ, ಮಹೇಶ್ ಖಾರ್ವಿ, ಮಾಲತೇಶ್, ಸುಬ್ರಹ್ಮಣ್ಯ ಗುಡಿಗಾರ್, ಲಿಂಗರಾಜ್ ಗೌಡ, ವೀಣಾ ಶ್ರೀಧರ್, ರೇವಣಪ್ಪ, ಶಿಕ್ಷಕ ಮಂಜಪ್ಪ ಇತರರಿದ್ದರು. ವಿವಿಧ ಬಗೆಯ ಅಂಗಡಿಗಳು ಮೇಳದಲ್ಲಿ ಖಾದಿ ಬಟ್ಟೆಗಳು, ಹಲಸಿನ ಹಣ್ಣಿನ ಹಿಡ್ಲಿ, ದೋಸೆ, ಪಕೋಡ ಹಾಗೂ ಅಡಕೆ ಚಹ, ಮಂಡಕ್ಕಿ, ಮಿರ್ಚಿ ಸೇರಿದಂತೆ ವಿವಿಧ ಬಗೆಯ ತಿಂಡಿ ತಿನಿಸುಗಳ ಅಂಗಡಿ, ಆಯುರ್ವೇದ ಔಷಧ ಅಂಗಡಿಗಳು, ಕರಕುಶಲ ವಸ್ತುಗಳು, ಪುಸ್ತಕದ ಸ್ಟಾಲ್ ಸೇರಿದಂತೆ ಬಗೆಬಗೆಯ ಅಂಗಡಿಗಳು ತೆರೆದಿದ್ದವು. ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕೆಲವು ವರ್ಷಗಳಿಂದ ಸತತವಾಗಿ ಆಹಾರ ಮೇಳ ಸೇರಿ ವಿವಿಧ ಕಾರ್ಯಕ್ರಮ ಮಾಡುತ್ತ ಬಂದಿದ್ದೇವೆ. ಸ್ಥಳೀಯರ ಮತ್ತು ಸಾಹಿತ್ಯಾಸಕ್ತರ ಸಹಕಾರವಿದ್ದಾಗ ಇನ್ನೂ ಹೆಚ್ಚಿನ ರೀತಿ ಕಾರ್ಯಕ್ರಮ ಮಾಡಲು ಸಾಧ್ಯ. ಷಣ್ಮುಖಾಚಾರ್ ಸೊರಬ ತಾಲೂಕು ಕಸಾಪ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net