ಗುಡಿ ತುಂಬಿದ ದೊಡ್ಡಕ್ಕ ಏಕನಾಥೇಶ್ವರಿ ದೇವಿ

Ekanatheshwaridevi
Published on

ಚಿತ್ರದುರ್ಗ: ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ಉತ್ಸವ ಮೂರ್ತಿಯ ಗುಡಿ ತುಂಬುವ ಕಾರ್ಯ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಶನಿವಾರ ಸಿಡಿ ಮಹೋತ್ಸವ ಸಂಪನ್ನಗೊಂಡ ಬಳಿಕ ದೇವಿಯ ಉತ್ಸವ ಮೂರ್ತಿ ಉಚ್ಚಂಗಿಯಲ್ಲಮ್ಮ ದೇವಿ ದೇಗುಲ, ದೊಡ್ಡಪೇಟೆ, ಉಜ್ಜಯನಿ ಮಠ, ಕೂಡಲೀ ಶೃಂಗೇರಿ ಮಠ, ಜೋಗಿಮಟ್ಟಿ ರಸ್ತೆ ಮಾರ್ಗವಾಗಿ ಸಂಚರಿಸಿತು.

ನಾಲ್ಕನೇ ತಿರುವಿನ ಬಳಿ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿ ಮುಖಾಮುಖಿಯಾದ ಕಾರಣ ಅಕ್ಕ-ತಂಗಿಯರಾದ ಶಕ್ತಿದೇವತೆಗಳು ಪರಸ್ಪರ ಭೇಟಿಯಾದರು. ಇದೇ ವೇಳೆ ಹರ್ಷೋದ್ಗಾರ ಮುಗಿಲುಮುಟ್ಟಿತು.

ನಂತರ ಸುಣ್ಣದ ಗುಮ್ಮಿ, ಜಟ್‌ಪಟ್ ನಗರ, ಪ್ರಶಾಂತ ನಗರ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್, ಕೋಟೆ ಮಾರ್ಗವಾಗಿ ಸಂಚರಿಸಿತು. ಇದೇ ವೇಳೆ ಆಯಾ ಭಾಗದ ಭಕ್ತರು ಪೂಜೆ, ಮಹಾಮಂಗಳಾರತಿ ಸೇವೆ ನೆರವೇರಿಸಿದರು. ನಂತರ ಪ್ರಸಾದ ವಿತರಿಸಿದರು.

ಕೋಟೆ ಏರುವಾಗಲೂ ಒಲ್ಲದ ಮನಸ್ಸಿನಿಂದ ಹೊರಟ ದೇವಿಯ ಉತ್ಸವ ಮೂರ್ತಿಯನ್ನು ಮೇಲು ದುರ್ಗದ ಮೂಲ ದೇಗುಲ ಬಳಿ ಕರೆತರಲಾಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ಒಂದು ವಾರದಿಂದಲೂ ಊರಾಡಿದ ದೇವಿಯ ಉತ್ಸವ ಮೂರ್ತಿಗೆ ಶಾಸ್ತ್ರ, ಸಂಪ್ರದಾಯದಂತೆ ಗಂಗಾಪೂಜೆ ನೆರವೇರಿತು.

ಬಳಿಕ ಅರ್ಚಕರು ಮೂರ್ತಿಯನ್ನು ಹೊತ್ತು ಗುಡಿಯೊಳಗೆ ಹೆಜ್ಜೆ ಹಾಕಿದರು. ಉರುಮೆಯ ನಾದ, ಮಂಗಳ ವಾದ್ಯದೊಂದಿಗೆ ಗುಡಿ ಪ್ರವೇಶಿಸಲು ಒಂದೂವರೆ ತಾಸು ಸತಾಯಿಸಿದ ನಂತರ ಗುಡಿ ತುಂಬಿದ ದೃಶ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ಓಕುಳಿ ಸೇವೆ ಕೂಡ ನೆರವೇರಿತು.

ನಂಬಿಕೆ ಈಗಲೂ ಪ್ರಚಲಿತದಲ್ಲಿದೆ: ದೇವಿಗೆ ಭಕ್ತರ ಮನೆಗಳೇ ತವರು ಎಂಬ ನಂಬಿಕೆ ಶತಮಾನಗಳಿಂದಲೂ ಈ ಭಾಗದಲ್ಲಿ ಬೇರೂರಿದೆ. ಸ್ತ್ರೀಯರು ತವರಿಗೆ ಬಂದಾಗ ಸಂಭ್ರಮಿಸಿ, ಪತಿಯ ಮನೆಗೆ ಹೋಗುವ ವೇಳೆ ಒಲ್ಲದ ಮನಸ್ಸಿನಿಂದ ಹಿಂದಿರುಗುವ ಮಾದರಿಯಲ್ಲೇ ದೇವಿ ಭಕ್ತರ ಮಧ್ಯೆ ವಿಜೃಂಭಿಸುತ್ತಾಳೆ. ಹೀಗಾಗಿ ಗುಡಿ ತುಂಬುವ ವೇಳೆ ಸತಾಯಿಸುತ್ತಾಳೆ ಎಂಬ ನಂಬಿಕೆ ಈಗಲೂ ಪ್ರಚಲಿತದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net