ಗುಡಿ-ಗೋಪುರಗಳಿಂದ ಸನಾತನ ಧರ್ಮಕ್ಕೆ ಮೆರುಗು

12 CRP 01
Published on

ಚನ್ನರಾಯಪಟ್ಟಣ: ಗುಡಿ-ಗೋಪುರಗಳು ತಲೆ ಎತ್ತಿದಷ್ಟೂ ಸನಾತನ ಧರ್ಮದ ಮೆರುಗು ಹೆಚ್ಚುತ್ತದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.


ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯ ಆವರಣದಲ್ಲಿ ಸ್ವಾಮಿಯ ನೂತನ ದೇಗುಲ ನಿರ್ಮಾಣ ನಿಮಿತ್ತ ಬದಲಿ ಗರ್ಭಗುಡಿಯ ನಿರ್ಮಾಣ ಕಾರ್ಯಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.


ಜನ್ಮ ಪಡೆದು ಬರುವ ಯಾರೊಬ್ಬರೂ ಈ ಭೂತಾಯಿಯ ಮಡಿಲಿನಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಆದರೂ ಹಣ-ಆಸ್ತಿ ಗಳಿಕೆಯ ಜತೆಗೆ ಮತ್ತೇನೋ ಪಡೆಯುವ ಆಸೆ ಹೊಂದುತ್ತಾರೆ. ಆದರೆ ಅದರಷ್ಟೇ ಮಾನವ ದಾನ ಮತ್ತು ಧರ್ಮಕ್ಕೂ ಮುಂದಾಗಬೇಕು. ಹಸಿದರಿಗೆ ಅನ್ನ, ಬಾಯಾರಿದವರಿಗೆ ನೀರು ಹಾಗೂ ನೆರಳಿಲ್ಲದವರಿಗೆ ಆಶ್ರಯ ನೀಡಿದರೆ ಭಗವಂತನ ಪಾದದಲ್ಲಿ ಮುಕ್ತಿ ಲಭಿಸಲಿದೆ ಎಂದು ಎಂದು ಕಿವಿಮಾತು ಹೇಳಿದರು.


ಇದಕ್ಕೂ ಮೊದಲು ಶ್ರೀ ಬಸವೇಶ್ವರಸ್ವಾಮಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ, ಮುತ್ತಿನ ಆರತಿ ಬೆಳಗಿಸಿದರು. ಆವರಣದಲ್ಲಿರುವ ಶ್ರೀ ನಾಗದೇವತೆ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ತಳಿ ಹಾಗೂ ದೇಗುಲದ ಹಿಂಭಾಗದಲ್ಲಿರುವ ಬಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗುಡಿಗೌಡ ಪ್ರಕಾಶ್, ಕಬ್ಬಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಪ್ರಮುಖರಾದ ಗಣೇಶ್‌ಗೌಡ, ಜವರೇಗೌಡ, ನಂದೀಶ್ ಹಾಗೂ ಕಬ್ಬಳಿ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net