ಗುಡಿ ಕೈಗಾರಿಕೆಗೆ ಮಾರುಕಟ್ಟೆ ದೊರೆತಾಗ ನಿರುದ್ಯೋಗ ನಿವಾರಣೆ: ಸಾಹಿತಿ ದೇವನೂರ ಮಹದೇವ ಅಭಿಪ್ರಾಯ

23
Published on

ಮೈಸೂರು: ರಾಜ್ಯಗಳು ಹೆಚ್ಚು ಸ್ವಾಯತ್ತವಾಗಿ ವಿಕೇಂದ್ರೀಕರಣದ ಕಡೆಗೆ ಚಲಿಸಿ, ಸ್ಥಳೀಯವಾಗಿ ಗುಡಿ ಕೈಗಾರಿಕೆ ಹಾಗೂ ಅದಕ್ಕೆ ಮಾರುಕಟ್ಟೆ ದೊರೆತಾಗ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ ಎಂದು ಸಾಹಿತಿ ದೇವನೂರ ಮಹದೇವ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಅಂಬೇಡ್ಕರ್ ಪೀಠ ಮತ್ತು ಇಂಡಿಯನ್ ಪಾಲಿಟ್‌ಫೋರಂ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಕ್ಷೇತ್ರ ಪುನರ್ವಿಂಗಡಣೆ: ಅಂತಾರಾಜ್ಯ ಅಸಮಾನತೆ ಮತ್ತು ಅದರ ಪರಿಣಾಮಗಳು’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಸಬಲೀಕರಣವಾಗದೆ ರಾಜ್ಯಗಳ ನಡುವಿನ ಆರ್ಥಿಕ ಅಸಮತೋಲನ ನೀಗುವುದಾದರೂ ಹೇಗೆ? ರಾಜ್ಯಗಳು ಹೆಚ್ಚು ಸ್ವಾಯತ್ತವಾಗಿ ವಿಕೇಂದ್ರೀಕರಣದ ಕಡೆಗೆ ಚಲಿಸಿದಾಗ, ಸ್ಥಳೀಯವಾಗಿ ಗುಡಿ ಕೈಗಾರಿಕೆ ಹಾಗೂ ಅದಕ್ಕೆ ಮಾರುಕಟ್ಟೆ ದೊರೆತಾಗ, ಸಣ್ಣ ಸಣ್ಣ ಕೈಗಾರಿಕೆಗಳ ಸಂಖ್ಯೆ ಹೆಚ್ಚಿದಾಗ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ. ಆಗ ಸಬಲೀಕರಣ ನಡೆದಾಡತೊಡಗುತ್ತದೆ ಎಂದು ತಮ್ಮದೇ ಪರಿಹಾರ ಸೂಚಿಸಿದರು.
ಐಟಿಬಿಟಿಯಲ್ಲಿ ಕೆಲಸ ಮಾಡುವವರು ಲಕ್ಷಾಂತರ ರೂಪಾಯಿ ದುಡಿಯುತ್ತಾರೆ. ಅವರು ಸ್ಥಳೀಯ ವಸ್ತುಗಳನ್ನು ಖದೀರಿಸುವ ಮೂಲಕ ಇಲ್ಲಿಯ ಆರ್ಥಿಕತೆ ಬೆಳವಣಿಗೆಗೆ ಸಹಕಾರ ನೀಡಬೇಕು. ನಮ್ಮ ರೈತರ ಉತ್ಪನ್ನಗಳಿಗೂ ಗಮನ ನೀಡಬೇಕು. ಒಂದೊಮ್ಮೆ ಎಲ್ಲವನ್ನು ವಿದೇಶದಿಂದಲೇ ಅಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಏನಾಗುತ್ತದೆ ಎಂದು ಕೊಂಚ ಯೋಚಿಸಬೇಕು ಎಂದು ಸಲಹೆ ನೀಡಿದರು.
ದೇಶವು ರಾಜ್ಯಗಳ ಒಕ್ಕೂಟವಾಗಿರುವುದರಿಂದ ಹಿಂದುಳಿದ ರಾಜ್ಯಗಳಿಗೆ ಆರ್ಥಿಕವಾಗಿ ಹೆಚ್ಚು ಅನುದಾನ ಹಂಚಿಕೊಂಡರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಎಲ್ಲಿಯತನಕ ಸಬಲೀಕರಣ ಅಗುವುದಿಲ್ಲವೋ ಅಲ್ಲಿಯವರೆಗೆ ದೇಶದ ಹಸಿವು ಹಾಗೂ ಬಡತನಕ್ಕೆ ಸ್ಪಂದಿಸಬೇಕಾಗುತ್ತದೆ ಎಂದರು.
ರಾಜ್ಯಗಳಿಗೆ ಅಲ್ಲಿನ ಪ್ರಮುಖ ಭಾಷೆಯನ್ನು ಎಲ್ಲೆ ಮಾಡಿರುವುದರ ಹಿಂದೆ ವಿವೇಕ, ವಿವೇಚನೆ ಇದೆ. ಒಕ್ಕೂಟ ರಾಜ್ಯವನ್ನು ಯಾವುದೇ ಒಂದು ಭಾಷೆಯವರು ಆಳ್ವಿಕೆ ನಡೆಸುವಂತಾಗಬಾರದು ಎಂಬ ಅಂತರ್ಗತ ಎಚ್ಚರಿಕೆಯೂ ಅದರಲ್ಲಿದೆ. ಇದು ಭಾರತಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಭಾಷೆಯ ಎಲ್ಲೆ ಉಲ್ಲಂಘಿಸಿ, ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳನ್ನು ನಿಗದಿಪಡಿಸಿದರೆ ಇದು ಭಾರತ ಎನ್ನುವ ಪರಿಕಲ್ಪನೆಗೆ ದುಃಸ್ವಪ್ನ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸದಸ್ಯರ ಸಂಖ್ಯೆ 888ಕ್ಕೆ ಏರಿಕೆಯಾದರೆ, ಲೋಕಸಭೆಯಲ್ಲಿ ಗದ್ದಲ ಡಬಲ್ ಆಗಬಹುದಷ್ಟೆ ಎಂದು ಪ್ರತಿಪಾದಿಸಿದರು.
ಹಿರಿಯ ವಕೀಲ ರವಿವರ್ಮ ಕುಮಾರ್ ಮಾತನಾಡಿ, ಒಂದು ಮತ, ಒಂದು ಮೌಲ್ಯದ ಮೇಲೆ ಪ್ರಜಾತಂತ್ರವನ್ನು ಕಟ್ಟಲಾಗಿದೆ. ಜನಗಣತಿ ಎನ್ನುವುದು ಈ ದೇಶದ ಆಶಾಕಿರಣ. ಅದನ್ನು ನಡೆಸಿದರೆ ಎಲ್ಲಿ ಸತ್ಯ ಹೊರಬರುತ್ತದೆಯೋ ಎಂಬ ಆತಂಕ ಆಳುವವರಿಗೆ ಇರುತ್ತದೆ. ಜನಗಣತಿ ಮಾಡದಿದ್ದರೆ ಮೀಸಲಾತಿಯೇ ಸಿಗುತ್ತಿರಲಿಲ್ಲ. ಕ್ಷೇತ್ರ ಮರುವಿಂಗಡಣೆ ಪಾರದರ್ಶಕವಾಗಿರಬೇಕು. ಸಾರ್ವಜನಿಕ ಚರ್ಚೆ ನಂತರ ಅದನ್ನು ಪ್ರಕಟಿಸಬೇಕು ಎಂದರು.
ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾದರೆ 300 ಸ್ಥಾನಗಳು ಈವರೆಗೂ ಪ್ರಾತಿನಿಧ್ಯ ಸಿಗದವರಿಗೆ, ಮಹಿಳೆಯರಿಗೆ ದೊರೆಯುವಂತಾಗಬೇಕು. ಹಿಂದುಳಿದ ವರ್ಗಗಳಿಗೆ ಯಾವುದೇ ರೀತಿಯ ಪ್ರಾತಿನಿಧ್ಯ ಸಿಕ್ಕಿಲ್ಲ. ಅವರಿಗೆ 100 ಸೀಟು ಕೊಡಬೇಕು ಎಂದು ಒತ್ತಾಯಿಸಿದರು. ಜೆಎನ್‌ಯು ವಿಶ್ರಾಂತ ಪ್ರಾಧ್ಯಾಪಕಿ ಜಾನಕಿ ನಾಯರ್, ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಐಸೆಕ್ ನಿರ್ದೇಶಕ ಪ್ರೊ.ಡಿ. ರಾಜಶೇಖರ್, ನಿವೃತ್ತ ಪ್ರಾಧ್ಯಾಪಕರಾದ ನಾಗರಾಜು, ಟಿ.ಆರ್.ಚಂದ್ರಶೇಖರ್, ನಿವೃತ್ತ ಸಹ ಪ್ರಾಧ್ಯಾಪಕಿ ಸ್ವರ್ಣಮಾಲಾ ಶಿರಸಿ ಹಾಗೂ ಎನ್‌ಐಇ ಕಾರ್ಟ್ ಮಾಜಿ ನಿರ್ದೇಶಕ ಯು.ಎನ್. ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net