

ಮಲ್ಲಪ್ಪ ಗೌಡ ಔರಾದ್
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅನುದಾನ ಬಳಸಿಕೊಂಡು ಗುಡಪಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸಂತೋಷ ಪಾಟೀಲ್ ಅವರು ಕಚೇರಿ ಆವರಣಕ್ಕೆ ಹಸಿರುಮಯ ಸ್ಪರ್ಶ ನೀಡಿದ್ದಾರೆ. ಆವರಣದಲ್ಲಿ ತಲೆ ಎತ್ತಿರುವ ಉದ್ಯಾನವನ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಜಿಲ್ಲೆಯಲ್ಲಿ ಗ್ರಾಪಂ ಆವರಣವೊಂದು ಇಷ್ಟೊಂದು ಮಸ್ತ್ ಕಾಣುತ್ತಿರುವುದು ಮಾದರಿ ಎನಿಸಿದೆ. ಬೇಸಿಗೆ ಸುಡು ಬಿಸಿಲಲ್ಲೂ ಹಚ್ಚ ಹಸಿರಿನಿಂದ ಆವರಣ ನಳನಳಿಸುತ್ತಿದೆ. ಪ್ರತಿದಿನ ವಿವಿಧ ಕೆಲಸ-ಕಾರ್ಯಗಳಿಗಾಗಿ ಗ್ರಾಪಂ ಕೇಂದ್ರಕ್ಕೆ ಬರುವ ಹಳ್ಳಿಗರ ಮನಸ್ಸಿಗೆ ಇಲ್ಲಿನ ಆಹ್ಲಾದಕರ ವಾತಾವರಣ ಮುದ ನೀಡುತ್ತಿದೆ.
ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಸುಮಾರು 560 ಮಾನವ ದಿನಗಳನ್ನು ಬಳಸಿಕೊಂಡು 9 ಲಕ್ಷ ರೂ. ಅನುದಾನದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿದೆ. ಸ್ಥಳೀಯ ಸರ್ಕಾರ ಎಂದೇ ಬಿಂಬಿತ ಗ್ರಾಪಂ ಕಚೇರಿ ಸುಂದರೀಕರಣಗೊಳಿಸಿದ ಪಿಡಿಒ ಸಂತೋಷ ಅವರ ಕಾರ್ಯ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಆವರಣವಷ್ಟೇ ಅಲ್ಲದೆ, ಇತರ ಅಭಿವೃದ್ಧಿ ಕಾರ್ಯಗಳಲ್ಲೂ ಗುಡಪಳ್ಳಿ ಗ್ರಾಪಂ ಮಾದರಿಯಾಗಿದ್ದು, ಕೇಂದ್ರದಲ್ಲಿ ಹೈಟೆಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಂದು ಕೆಲಸ ಸೌರ ಶಕ್ತಿಯಿಂದಲೇ ನಡೆದಿದೆ. ರಾತ್ರಿ ಹೊತ್ತು ಸೋಲಾರ್ ದೀಪಗಳು ಪಂಚಾಯಿತಿ ಆವರಣವನ್ನು ಝಗಮಗಿಸುತ್ತವೆ. ಈ ಎಲ್ಲ ಕಾರಣಗಳಿಂದ 2019-20ರಲ್ಲಿ ಈ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೂ ಭಾಜನವಾಗಿದೆ.
ಗ್ರಾಪಂಗೆ ಬರುವ ಸಾರ್ವಜನಿಕರಿಗೆ ಓಡಾಡಲು ವಾಕಿಂಗ್ ಟಾ್ರೃಕ್, ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಾನದಲ್ಲಿ ವಿವಿಧ ಜಾತಿಯ ಸಸ್ಯಗಳು ಮತ್ತು ಹೂವಿನ ಗಿಡಗಳನ್ನು ಸಹ ಬೆಳೆಸಲಾಗಿದೆ. ಜಿಲ್ಲೆಯಲ್ಲೇ ವಿನೂತನ ಮಾದರಿ ಗ್ರಾಪಂ ಉದ್ಯಾನವನ ಇದಾಗಿದೆ ಎಂದು ಗ್ರಾಮಸ್ಥರು ಹೆಮ್ಮೆಯಿಂದ ಹೇಳುತ್ತಾರೆ.
ಜ್ಞಾನಾರ್ಜನೆ ವೃದ್ಧಿಸುವ ಹೈಟೆಕ್ ಗ್ರಂಥಾಲಯ: ಗ್ರಾಮೀಣ ಜನರಲ್ಲಿ ಪತ್ರಿಕೆ, ಪುಸ್ತಕ ಓದುವ ಅಭಿರುಚಿ ಮೂಡಿಸುವಲ್ಲಿ ಗ್ರಂಥಾಲಯಗಳ ಪಾತ್ರ ಹಿರಿದಾಗಿದೆ. ಆದರೆ ಮೊಬೈಲ್ ಬಂದ ಬಳಿಕ ಗ್ರಂಥಾಲಯಗಳ ಮೇಲಿನ ಆಸಕ್ತಿ ಸ್ವಲ್ಪ ಕಡಿಮೆಯಾಗಿದೆ. ಆದರೆ ಪಿಡಿಒ ಸಂತೋಷ ಪ್ರಯತ್ನದ ಫಲವಾಗಿ ಕಚೇರಿಯ ಒಂದು ಕೋಣೆಯಲ್ಲಿ 3.58 ಲಕ್ಷ ರೂ. ನರೇಗಾ ಅನುದಾನದಲ್ಲಿ ಗ್ರಂಥಾಲಯಕ್ಕೆ ಹೊಸ ರೂಪ ಕೊಟ್ಟು ಜ್ಞಾನದೇಗುಲವನ್ನಾಗಿ ಪರಿವರ್ತನೆಯಾಗಿದೆ. 6000ಕ್ಕೂ ಹೆಚ್ಚಿನ ಪುಸ್ತಕಗಳು, ಕಂಪ್ಯೂಟರ್, ಸೋಲಾರ್, ಅಂತರ್ಜಲ ವ್ಯವಸ್ಥೆ ಕಲ್ಪಿಸಿ ಹಳ್ಳಿ ಮಕ್ಕಳಿಗೆ ಮಾಹಿತಿ, ತಂತ್ರಜ್ಞಾನದ ಜ್ಞಾನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಗ್ರಾಪಂ ಕಚೇರಿ ವೈಫೈ ಸೌಲಭ್ಯ ಹೊಂದಿದೆ. ಈ ಗ್ರಾಪಂಗೆ ಭೇಟಿ ನೀಡಿದ್ದ ಹಳೇ ಡಿಸಿ ಎಚ್.ಆರ್. ಮಹಾದೇವ್ ಸಕಲ ಸೌಲಭ್ಯಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಮಗ್ರ ನೀರಿನ ಬಳಕೆಗೆ ಮೆಚ್ಚುಗೆ: ಗ್ರಾಪಂಗೆ ಕಳೆದ ವರ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದಶರ್ಿ ಎಲ್.ಕೆ. ಅತೀಕ್ ಭೇಟಿ ನೀಡಿ ಸಮಗ್ರ ನೀರಿನ ಬಳಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಪಿಡಿಒ ಸಂತೋಷ ಪಾಟೀಲ್ ಕಾರ್ಯಕ್ಕೆ ಸಾರ್ವಜನಿಕರು ಸಹ ಮೆಚ್ಚುಗೆ ಸೂಚಿಸುತ್ತಿದ್ದು, ಬೇರೆ ಗ್ರಾಪಂ ಪಿಡಿಒಗಳು ಸಹ ಸಂತೋಷ ಕೈಗೊಂಡ ಕ್ರಮಗಳನ್ನು ಅನುಸರಿಸಿ ಮಾದರಿಯಾಗಿ ರೂಪಿಸಲು ಸಲಹೆ ನೀಡುತ್ತಿದ್ದಾರೆ.
ಪಿಡಿಒ ಸಂತೋಷ ಪಾಟೀಲ್ ಆಸಕ್ತಿಯಿಂದ ಇಷ್ಟೆಲ್ಲ ಕಾರ್ಯ ಮಾಡಿದ್ದು, ಮಾದರಿಯಾಗಿದೆ. ಹಳ್ಳಿ ಮಕ್ಕಳ ವಯೋಮಿತಿಗೆ ಅನುಗುಣ ಸ್ಪಧರ್ಾತ್ಮಕ ಜಗತ್ತಿಗೆ ಸವಾಲೊಡ್ಡುವಂಥ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಟ್ಟಿದ್ದಾರೆ. ಇದರಿಂದ ಗ್ರಾಮೀಣ ಮಕ್ಕಳ ಜ್ಞಾನಾರ್ಜನೆ ವೃದ್ಧಿಗೆ ಸಹಕಾರಿಯಾಗಿದೆ. ನರೇಗಾದಡಿ ಸುಂದರ ಉದ್ಯಾನ ನಿರ್ಮಿಸಿದ್ದು, ಇವರ ಕಾರ್ಯವನ್ನು ಇತರ ಪಿಡಿಒಗಳು ಅನುಸರಿಸಿದರೆ ಎಲ್ಲ ಗ್ರಾಪಂಗಳು ಅಭ್ಯುದಯ ಕಾಣಲಿವೆ.
| ಜಹೀರಾ ನಸೀಮ್, ಜಿಪಂ ಸಿಇಒ
ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜನರ, ಅಧ್ಯಕ್ಷ ಮತ್ತು ಸದಸ್ಯರ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ನಮ್ಮ ಗ್ರಾಪಂ ಪ್ರಗತಿಗೆ ಎಲ್ಲರೂ ಕೈಜೋಡಿಸುತ್ತಿರುವ ಹಿನ್ನೆಲೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ಸಿಗುತ್ತಿದೆ.
| ಸಂತೋಷ ಪಾಟೀಲ್, ಗುಡಪಳ್ಳಿ ಗ್ರಾಪಂ ಪಿಡಿಒ