ಗುಟ್ಟಹಳ್ಳಿಯಲ್ಲಿ ಗೋಶಾಲೆ ತೆರೆಯಲು ತೀರ್ಮಾನ

27-klr-11
Published on

ಕೋಲಾರ: ಜಿಲ್ಲೆಗೊಂದು ಗೋಶಾಲೆ ಅಡಿಯಲ್ಲಿ ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿ ಬಂಗಾರುತಿರುಪತಿ ದೇವಾಲಯದ ಬಳಿ ಸರ್ಕಾರಿ ಗೋಶಾಲೆ ಹಾಗೂ ಪಿಂಜರಾಪೋಲ್ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಎರಡು ಗೋಶಾಲೆ ನಿರ್ವಹಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಡಿಸಿ ಡಾ.ಆರ್.ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪ್ರಾಣಿದಯಾ ಸಂಘದ ಕೋಲಾರ ಸಮಿತಿ ಸಭೆಯಲ್ಲಿ ಕೆಜಿಎಫ್‌ನ ಗುಟ್ಟಹಳ್ಳಿಯ ಬಂಗಾರು ತಿರುಪತಿ ದೇವಾಲಯ ಸಮೀಪದ ಗೋಮಾಳ 9.38 ಎಕರೆ ಪ್ರದೇಶದಲ್ಲಿ ಗೋಮಾಳ ತೆರೆಯಲು ತೀರ್ಮಾನ ತೆಗೆದುಕೊಳ್ಳಲಾಯಿತು.

ಪಿಂಜರಾಪೋಲ್ ಸಹಾಯಧನ ಯೋಜನೆಯಡಿ ಕೆಜಿಎಫ್‌ನ ಬ್ಯಾಟರಾಯನಹಳ್ಳಿಯ ಶ್ರೀನಂದಿ ಗೋಶಾಲಾ ಅಭಿವೃದ್ಧಿ ಟ್ರಸ್ಟ್, ಕೆಜಿಎಫ್‌ನ ಕಾವೇರಹಳ್ಳಿಯ ಶ್ರೀರಕ್ಷಾ ಫೌಂಡೇಷನ್ ಧಾತ್ರಿ ಗೋದಾಮ ಶಾಲೆಗಳಿಗೆ ಸಹಾಯಧನ ಮಂಜೂರು ಮಾಡಲು ನಿರ್ಧರಿಸಿ ಪಿಪಿಪಿ ಮಾದರಿಯಲ್ಲಿ ಗೋಶಾಲೆ ನಡೆಸಲು ಅ.2ರ ಗಾಂಧಿ ಜಯಂತಿಯಂದು ಚಾಲನೆ ನೀಡುವ ಬಗ್ಗೆ ಚರ್ಚಿಸಲಾಯಿತು.

ಕ್ರಮ ವಹಿಸಿ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿರುವುದರಿಂದ ಲಸಿಕೆ ಇಲ್ಲದಿದ್ದರೂ ರೋಗ ಉಲ್ಬಣಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ, ರೋಗ ಕಂಡುಬಂದ ಕಡೆ ಸ್ಯಾನಿಟೈಸ್ ಮಾಡಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಜಾನುವಾರುಗಳ ಸಂತೆಯಿಂದ ಮಾದರಿ ತೆಗೆದು ಪರೀಕ್ಷಿಸಿ, ಕಾಲುಬಾಯಿ ಜ್ವರ ಕಂಡುಬಂದಲ್ಲಿ ಸಂತೆ ನಿಷೇಧಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ಕೆಜಿಎಫ್, ಕೋಲಾರದಲ್ಲಿ ಜಿಂಕೆ ಇನ್ನಿತರ ಪ್ರಾಣಿಗಳ ಮೇಲೆ ನಾಯಿ ದಾಳಿ ತಡೆಗೆ ಬಿಬಿಎಂಪಿ ಸೇರಿ ಬೇರೆ ಜಿಲ್ಲೆಗಳಲ್ಲಿ ಅನುಸರಿಸುತ್ತಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಉಪ ನಿರ್ದೇಶಕರಿಗೆ ಸೂಚಿಸಿದರು. ಪಂಜರದಲ್ಲಿ ಪಕ್ಷಿ ಸಾಕುವುದು ಕಾನೂನು ಬಾಹಿರ. ಈ ಸಂಬಂಧ ಕೇಸು ದಾಖಲಿಸಿ ಮಾಧ್ಯಮಗಳಲ್ಲಿ ಪ್ರಚುರಪಡಿಸುವಂತೆ ಸೂಚನೆ ನೀಡಿದರು.

ಆರ್‌ಟಿಒ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲ ಎಂಬ ನೆಪಕ್ಕೆ ಅಕ್ರಮವಾಗಿ ಜಾನುವಾರು, ಕುರಿ, ಮೇಕೆ, ಹಂದಿಗಳ ಸಾಕಾಣಿಕೆ ಬಗ್ಗೆ ಕ್ರಮ ವಹಿಸದಿದ್ದರೆ ಹೇಗೆ? ಸಾಗಾಣಿಕೆಯ ಹಾಟ್‌ಸ್ಪಾಟ್ ಗುರುತಿಸಿ ಆರ್‌ಟಿಒ ಅಧಿಕಾರಿಗಳಿಂದ ತಪಾಸಣೆ ಮಾಡಿಸಿ ವಾಹನ ಜಪ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಶ್ರೀನಿವಾಸಪುರದ ರೋಜರಪಲ್ಲಿ, ಕೆಜಿಎಫ್, ಬಂಗಾರಪೇಟೆ ಇತರೆರೆಡೆ ಜಾನುವಾರುಗಳ ಸಂತೆ ನಡೆಯುತ್ತಿದೆ.ನೆರೆಯ ಆಂಧ್ರ, ತಮಿಳುನಾಡು ಕಡೆಯಿಂದ ಜಾನುವಾರು ತಂದು ಮಾರುತ್ತಿರುವುದರಿಂದ ಕಾಲುಬಾಯಿ ಜ್ವರ ಹರಡುವ ಸಾಧ್ಯತೆ ಬಗ್ಗೆ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಜಗದೀಶ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.

ಹುಚ್ಚುನಾಯಿ ರೋಗದ ಕುರಿತು ತಾಲೂಕು ಮಟ್ಟದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೆ.28ರಂದು ಜಿಲ್ಲೆಯ 113 ಪಶು ಆಸ್ಪತ್ರೆಗಳಲ್ಲಿ ಕನಿಷ್ಠ 10 ನಾಯಿಗಳಿಗೆ ರೋಗದ ವಿರುದ್ಧ ಲಸಿಕೆ ಹಾಕಲಾಗುವುದು ಎಂದರು. ಸಮಿತಿ ಸದಸ್ಯ ತ್ಯಾಗರಾಜ್ ಮಾತನಾಡಿ, ಮುಳಬಾಗಿಲಿನ ದೇವರಾಯಸಮುದ್ರದಲ್ಲಿ ಗೋಮಾಳ ಜಾಗದಲ್ಲಿ ಗ್ರಾಪಂ ಹಾಗೂ ಗ್ರಾಮ ವಿಕಾಸ ಸಂಸ್ಥೆಯಿಂದ ಗೋ ಶಾಲೆ ತೆರೆಯಲು ಸಿದ್ದವಿದೆ, ಇದಕ್ಕೆ ಅವಕಾಶ ನೀಡಬೇಕು, ಕೆಜಿಎಫ್ ಭಾಗದಲ್ಲಿ ನಾಯಿಗಳ ದಾಳಿಗೆ ಕರಷ್ಣಮೃತಗಳು ಬಲಿಯಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿಗಳು ಗಮನಹರಿಸಬೇಕು, ನಾಯಿಗಳ ಸಂತಾನಹರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಅನಿಮಲ್ ವೆಲ್‌ಫೇರ್ ಆಫ್ ಇಂಡಿಯಾಗೆ ಜಿಲ್ಲೆಯಿಂದ ತ್ಯಾಗರಾಜ್ ಅವರನ್ನು ವಾರ್ಡನ್ ಆಗಿ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಎಸ್ಪಿ ಡಿ.ಕಿಶೋರ್‌ಬಾಬು, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅಫ್ಜಲ್‌ಪಾಷಾ, ಹಿರಿಯ ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ್, ನಂದಿ ಗೋಶಾಲೆ ಟ್ರಸ್ಟ್‌ನ ಶ್ರೀನಿವಾಸಾಚಾರಿ ಪಾಲ್ಗೊಂಡಿದ್ದರು.

ದೇಶಾದ್ಯಂತ ಕಳೆದ ವರ್ಷ ಕಾಲುಬಾಯಿ ಜ್ವರಕ್ಕೆ ತರಿಸಿದ ಲಸಿಕೆ ಗುಣಮಟ್ಟದಲ್ಲಿಲ್ಲದ ಕಾರಣಕ್ಕೆ ಎಲ್ಲವನ್ನೂ ನಾಶಪಡಿಸಲಾಯಿತು. ಈ ಬಾರಿ ಲಸಿಕೆ ವಿತರಣೆಯಾಗಿಲ್ಲ, ಜಿಲ್ಲೆಯ ಕೆಲವೆಡೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ಅಲೋಪಥಿ, ಹೋಮಿಯೋಪಥಿ ಚಿಕಿತ್ಸೆ ನೀಡಿ ರೋಗ ನಿಯಂತ್ರಣಕ್ಕೆ ತರಲಾಗುತ್ತಿದೆ. ಡಾ. ಜಗದೀಶ್‌ಕುಮಾರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net