

ಶಿಕಾರಿಪುರ: ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಬರಲಿರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಪ್ರಧಾನಿ ಮೋದಿಯವರ ಸಮರ್ಥ ಆಡಳಿತದಿಂದ ಜನ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರಿಗೆ ಸಿಹಿ ಹಂಚಿ ಮಾತನಾಡಿದ ಅವರು, ಇಂದು ಇಡೀ ವಿಶ್ವವೇ ಭಾರತದ ಅಭಿವೃದ್ಧಿಯನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಇದು ಮೋದಿಯವರ ದೂರದೃಷ್ಠಿಯ ಆಡಳಿತದ ಫಲ. ಸಮರ್ಥ ನಾಯಕ ಮೋದಿ ನಮಗೆ ಸದಾ ಮಾದರಿ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಒಬ್ಬ ಶ್ರೇಷ್ಠ ಜನನಾಯಕರಾಗಿ ನಮಗೆ ಮಾದರಿಯಾಗಿದ್ದಾರೆ ಎಂದರು.
ಬಿಜೆಪಿ ತನ್ನ ಶಿಸ್ತು, ಅನುಶಾಸನ ಮತ್ತು ಸಂಘಟನೆ ಬಲದಿಂದ ತ್ರಿವಿಕ್ರಮನಂತೆ ಬೆಳೆದು ನಿಂತಿದೆ. ಪ್ರತಿ ಕಾರ್ಯಕರ್ತನೂ ಪಕ್ಷದ ಆಸ್ತಿ. ಗುಜರಾತ್‌ನಲ್ಲಿ ಜನ ಅಭಿವೃದ್ಧಿ ಮತ್ತು ಮೋದಿಯವರ ಆಡಳಿತದಿಂದ ಆಕರ್ಷಿತರಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ನಾವು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು. ನಮಗೆ ಇಷ್ಟೊಂದು ದೊಡ್ಡ ಶಕ್ತಿ ಬಂದಿರುವುದು ಸಂಘಟಿತ ಪ್ರಯತ್ನದಿಂದ. ಸಂಘಟನೆ ಬಲಗೊಂಡರೆ ಮತ್ತಷ್ಟು ಬಲಶಾಲಿಗಳಾಗುತ್ತೇವೆ ಎಂದು ಹೇಳಿದರು.