

ಮದ್ದೂರು: ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣಾ ಫಲಿತಾಂಶ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಗುರುವಾರ ರಾತ್ರಿ ಬಿಜೆಪಿ ಮುಖಂಡ ಹಾಗೂ ಮನಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಯೋಜನೆಗಳು ಹಾಗೂ ಜನಪರ ಚಿಂತನೆಗಳಿಂದ ಗುಜರಾತ್‌ನಲ್ಲಿ ಬಿಜೆಪಿಗೆ ದಾಖಲೆಯ ಫಲಿತಾಂಶ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುಖಂಡ ಎಸ್.ಪಿ.ಸ್ವಾಮಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಈ ಬಗ್ಗೆ ಡಿ.16ರಂದು ಮದ್ದೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದರು.
ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ತಾಲೂಕಿನ ಬ್ಯಾಡರಹಳ್ಳಿ, ಎಸ್.ಐ ಹಾಗಲಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಹಮ್ಮಿಕೊಳ್ಳಲಾಗಿದ್ದ ಧರ್ಮಸ್ಥಳ ಪ್ರವಾಸಕ್ಕೆ ಸಚಿವ ಗೋಪಾಲಯ್ಯ ಇದೇ ವೇಳೆ ಚಾಲನೆ ನೀಡಿದರು. ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮುಖಂಡರಾದ ರಘು, ಬ್ಯಾಡರಹಳ್ಳಿ ಶಿವಕುಮಾರ್, ಉಪ್ಪಿನಕೆರೆ ಶಿವರಾಮು, ಚಿಕ್ಕಮರಿಯಪ್ಪ, ಗೊರವನಹಳ್ಳಿ ಮಧು, ಅಭಿ, ಸುಧಾಕರ್ ಇದ್ದರು.
.