ಗುಜರಾತಿ ಮಹಿಳಾ ಮಂಡಳದಿಂದ ವಾಕಥಾನ್, ಸಾಧಕರಿಗೆ ಸನ್ಮಾನ

Walk Thon
Published on

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ಗುಜರಾತಿ ಮಹಿಳಾ ಮಂಡಳದವರು ಕೆಎಲ್​ಇ ಸುಚಿರಾಯು ಆಸ್ಪತ್ರೆ, ಎಚ್​ಸಿಜಿ ಕ್ಯಾನ್ಸರ್ ಸೆಂಟರ್ ಹಾಗೂ ವಿವಿಧ ಮಹಿಳಾ ಮಂಡಳಗಳು, ಲೇಡಿಸ್ ಕ್ಲಬ್​ಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಜಾಗೃತಿ ನಡಿಗೆಗೆ (ವಾಕಥಾನ್) ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಸಮಾಜದ ನೂರರು ಮಹಿಳೆಯರು ಬೆಳಗ್ಗೆ 6.30ಕ್ಕೆ ನಗರದ ಗುಜರಾತ ಭವನದಲ್ಲಿ ಸೇರಿ ನಂತರ ವಾಕಥಾನ್ ಆರಂಭಿಸಿದರು. ಮಹಿಳೆಯರ ಸಮಾನತೆಗಾಗಿ ಹಮ್ಮಿಕೊಂಡಿದ್ದ ವಾಕಥಾನ್​ಗೆ ದೇವರ ನಾಮಸ್ಮರಣೆ ಮಾಡುವ ಮೂಲಕ ಮಂಡಳದ ಪದಾಧಿಕಾರಿಗಳು ಚಾಲನೆ ನೀಡಿದರು.

ದೇಶಪಾಂಡೆ ನಗರ, ಶಾರದಾ ಹೋಟೆಲ್ ಸರ್ಕಲ್, ಐಬಿ ಎದುರಿನಿಂದ ಹಾಯ್ದು ಪಿಂಟೋ ಸರ್ಕಲ್​ವರೆಗೆ ವಾಕಥಾನ್ ನಡೆಯಿತು. ಮಾರ್ಗದುದ್ದಕ್ಕೂ ಮಹಿಳಾ ಶಕ್ತಿಯ ಜಯಘೋಷಗಳು ಮೊಳಗಿದವು.

ನಾರಿ ಶಕ್ತಿ ದೇಶ್ ಕಿ ಶಕ್ತಿ, ಮಹಿಳೆ ಅಬಲೆಯಲ್ಲ ಸಬಲೆ, ಮಹಿಳೆಯನ್ನು ಗೌರವಿಸಿ... ಹೀಗೆ ಹಲವು ಘೋಷಣೆಗಳನ್ನು ಒಳಗೊಂಡ ಫಲಕ ಹಿಡಿದು ಜಾಗೃತಿ ಮೂಡಿಸಿದರು. ಪಿಂಟೋ ಸರ್ಕಲ್​ನಿಂದ ವಾಪಸ್ ಗುಜರಾತ್ ಭವನಕ್ಕೆ ಆಗಮಿಸಿದ ಮೇಲೆ ಸಭಾ ಕಾರ್ಯಕ್ರಮ ನಡೆಯಿತು.

ಮಹಿಳೆ ತನ್ನ ಶಕ್ತಿ ಅರಿಯಬೇಕು: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕರಾದ ವಾಣಿ ಆನಂದ ಸಂಕೇಶ್ವರ ಅವರು ಮಾತನಾಡಿ, ಮಹಿಳೆಯರು ಇಂದು ಎಲ್ಲ ರಂಗದಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಮನೆ ಇರಬಹುದು, ಉದ್ಯಮ, ಯಾವುದೇ ಸಂಸ್ಥೆಯಲ್ಲಿ ಕೆಲಸ ಇರಬಹುದು ಮಹಿಳೆಯರು ತಮ್ಮ ಶಕ್ತಿಯನ್ನು ಅರಿತರೆ ಏನಾದರೂ ಸಾಧನೆ ಮಾಡಬಹುದು, ಎಲ್ಲ ಕಡೆ ಸೈ ಎನಿಸಿಕೊಳ್ಳಬಹುದು ಎಂದರು. ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಭೇದಭಾವ ಕಡಿಮೆಯಾಗುತ್ತಿದೆ. ಆಚರಣೆಗಳು ಬದಲಾಗಿವೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ, ಅವಳೇ ಕುಟುಂಬದ ಬೆನ್ನೆಲುಬು ಎಂಬುದು ವಾಸ್ತವವಾಗಿದೆ ಎಂದರು.

ಗುಜರಾತಿ ಮಹಿಳಾ ಮಂಡಳದವರು ಅಚ್ಚುಕಟ್ಟಾಗಿ ಮಹಿಳಾ ದಿನಾಚರಣೆ ಆಯೋಜಿಸಿರುವುದಕ್ಕೆ ವಾಣಿ ಸಂಕೇಶ್ವರ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತಿ ಕೊಠಾರಿ, ಜ್ಯೋತಿ ಸಣ್ಣಕ್ಕಿ, ಕೃಷ್ಣಿ ಶಿರೂರ, ದಿವ್ಯಾ ಭಾಟಿಯಾ, ಉಷಾ ಒಸ್ವಾನಿ ಅವರನ್ನು ಸನ್ಮಾನಿಸಲಾಯಿತು.

ಗುಜರಾತಿ ಮಹಿಳಾ ಮಂಡಳದ ಅಧ್ಯಕ್ಷೆ ಭಕ್ತಿ ಟಕ್ಕರ್, ಮನಿಷಾ ಪಟೇಲ್, ಹೇಜಲ್ ಗೊರಾಡಿಯಾ, ಸೋನಲ್ ಪಾಂಚಾಲ, ದೀಪ್ತಿ ಟಕ್ಕರ್, ಪ್ರೀತಿ ಬೂತಡ, ಅಮೃತಾ ರಾಟಿ, ಶ್ವೇತಲ್ ಪಟೇಲ್, ಸ್ಮಿತಾ ಪಾಂಚಾಲ, ವನಿತಾ, ಡಾ. ವಿಶಾಖಾ, ಡಾ. ರಶ್ಮಿ, ಡಿಂಪಲ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net