ಗುಂಪುಗಳಿಂದ ಸಂಟನೆಗೆ ಅಪಾಯ : ಬಡಗಲಪುರ ನಾಗೇಂದ್ರ ಹೇಳಿಕೆ, ಹಿತಚಿಂತರನ್ನೊಳಗೊಂಡ ರೈತ ಆಂದೋಲನಕ್ಕೆ ಸಂಕಲ್ಪ

2
Published on

ಮಾಗಡಿ: ಹಸಿರು ಟವೆಲ್​ ಹಾಕಿಕೊಂಡ ಕಳ್ಳರು, ಮೋಜು ಮಸ್ತಿ ಮಾಡಿಕೊಂಡು ವಿದೇಶ ಸಂಬಂಧ ಇಟ್ಟುಕೊಂಡಿರುವರಿಂದ ರೈತ ಸಂಘಕ್ಕೆ ಧಕ್ಕೆಯಾಗುತ್ತಿದೆ. ಇವರನ್ನು ದೂರವಿಟ್ಟು ಪ್ರಾಮಾಣಿಕ ಮುಗ್ಧ ರೈತ, ಪ್ರಾಮಾಣಿಕ ವ್ತಕ್ತಿ, ಹಿತಚಿಂತಕರನ್ನು ಒಳಗೊಂಡ ರೈತ ಆಂದೋಲನವನ್ನು ಮುನ್ನಡೆಸುವ ಸಂಕಲ್ಪ ಆರಂಭಿಸುವುದಾಗಿ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಭಾನುವಾರ ರೈತಸಂಘ ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘ ಎಂದರೆ ನೀತಿ ನಿಯಮ, ಬದ್ಧತೆ ಇರಬೇಕು. ಒಬ್ಬ ವ್ಯಕ್ತಿಯ ಹಿಂಬಾಲಕರಾಗಿ ಗುಂಪು ಮಾಡಿಕೊಂಡು ಸಂಘ ರೂಪುಗೊಳ್ಳುತ್ತಿರುವುದು ಅಪಾಯವಾಗಿದೆ. ಹಾಗಾಗಿ 2012ರಿಂದಲೇ ಕೋಡಿಹಳ್ಳಿ ಚಂದ್ರಶೇಖರ್​ ಅವರನ್ನು ಸಂಟನೆಯಿಂದ ದೂರ ಇಡಲಾಗಿತ್ತು. ಅವರು ಒಂದು ಗುಂಪು ಕಟ್ಟಿಕೊಂಡು ನಾನು ಅಧ್ಯಕ್ಷ ಎಂದು ಹೋಗಿದ್ದರು. ಇಂದು ಅವರ ಕಾರ್ಯವೈಖರಿ ಜಗಜ್ಜಾಹಿರಾಗಿದೆ. ಹಸಿರು ಟವೆಲ್​ ಧರಿಸಿ ರೈತ ಸಮುದಾಯಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

80ರ ದಶಕದಲ್ಲಿ ಹುಟ್ಟಿದ ರೈತ ಚಳವಳಿ ರಾಜ್ಯದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದೆ. ರೈತರ ಮೇಲೆ ದಾಳಿ, ಹೊಸ ನೀತಿಗಳು, ಕಾಪೋರ್ರೇಟ್​ ಕ್ಷೇತ್ರದ ಬಲವರ್ಧನೆ, ರಾಜಕೀಯ ಮತ್ತು ಕಾೋರ್ರೇಟ್​ ಶಕ್ತಿಗಳ ಗುಲಾಮಗಿರಿಯಿಂದಾಗಿ ದುಡಿಯುವ ವರ್ಗಕ್ಕೆ ತೊಂದರೆಯಾಗಿದೆ. ಹಾಗಾಗಿ ಯುವಕರು, ರೈತವರ್ಗ ಎಲ್ಲೆಡೆ ಹಸಿರು ಟವಲ್​ ಧರಿಸುತ್ತಾ ಉತ್ಸಾಹದಿಂದ ರೈತ ಚಳವಳಿಗೆ ಶಕ್ತಿ ತುಂಬುತ್ತಿದ್ದಾರೆ. ರೈತರು, ದಲಿತರು, ಕಾರ್ಮಿಕರು, ಮಹಿಳೆಯರು, ರೈತರು, ವಿದ್ಯಾರ್ಥಿಗಳ ಸ್ವರೂಪವೇ ಸಂಯುಕ್ತ ಕರ್ನಾಟಕದ ಹೋರಾಟವಾಗಿದೆ ಎಂದರು.

ರೈತ ಚಳವಳಿಯ ಮೂಲ ಸಿದ್ಧಾಂತ ತ್ಯಾಗ, ಬಲಿದಾನವಾಗಿದೆ. ಎಚ್​.ಎಸ್​.ಉಗ್ರಪ್ಪ, ಪ್ರೊ. ನಂಜುಂಡಸ್ವಾಮಿ, ಎನ್​.ಡಿ. ಸುಂದ್ರೇಶ್​, ರುದ್ರಪ್ಪ ಮೊಕಾಸಿ, ಸುರೇಶ್​ ಗಜಪತಿ ಪಟೇಲ್​, ಚನ್ನಬಸಪ್ಪ ಬೆಟಲೂರು ನಂತರ ಕೆ.ಎಸ್​. ಪುಟ್ಟಣ್ಣಯ್ಯ ಅವರುಗಳು ತಮ್ಮ ಬದುಕನ್ನು ರೈತ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ಇಂದು ಹಲವಾರು ವಿಚಾರಗಳಿಂದಾಗಿ ರೈತಸಂ ಕವಲು ದಾರಿಯಲ್ಲಿ ಸಾಗುತ್ತ ವೈಚಾರಿಕ ವಿಚಾರಕ್ಕಿಂತ ವೈಯಕ್ತಿಕ ಇಚ್ಛಾಶಕ್ತಿಯೇ ಮುಖ್ಯವಾಗಿ ಸಂಘಟನೆಗಳು ಗುಂಪುಗಳಾಗುತ್ತಿವೆ ಎಂದರು.

ಈ ತಿಂಗಳು ರೈತರ ಸಭೆ ಕರೆದು ಸೈದ್ಧಾಂತಿಕ ಸ್ವಷ್ಟತೆ, ತಾತ್ವಿಕ ದೃಷ್ಟಿಕೋನ, ಆಶೋತ್ತರಗಳು, ರಾಜಕೀಯ ಸ್ವಷ್ಟತೆಯನ್ನು ಮುಂದಿಟ್ಟುಕೊಂಡು ಚಳವಳಿ ಕಟ್ಟಲಾಗುವುದು. ಯಾವುದೇ ಕಾಪೋರ್ರೇಟ್​, ರಾಜಕೀಯ ಶಕ್ತಿಗಳು ಹಿಮ್ಮೆಟ್ಟಿಸಿದರೂ ಎದೆಗುಂದದೆ ಧೈರ್ಯದಿಂದ ಎದುರಿಸುತ್ತೇವೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ರೈತರ ಜಮೀನು ಕಿತ್ತುಕೊಳ್ಳುವ ಸಂಚು, ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹಕ್ಕು ನಿಷೇಧ ಕಾಯ್ದೆ ವಿರುದ್ದ ಹೋರಾಟ ಮಾಡಲು ಆಗಸ್ಟ್​ನಿಂದ ರಾಜ್ಯದ 3 ಸಾವಿರ ಗ್ರಾಮಗಳು, 1 ಸಾವಿರ ಪಂಚಾಯಿತಿ ಸೇರಿ ಸಮಾವೇಶ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಉದ್ದೇಶಕ್ಕೆ ಬಳಕೆಯಾಗದ ಜಮೀನು: ಲ್ಯಾಂಡ್​ ಬ್ಯಾಂಕ್​ ಮೂಲಕ ಲಕ್ಷಾಂತರ ಎಕರೆ ರೈತರ ಜಮೀನು ಪಡೆಯಲಾಗಿದೆ. ಹಿಂದೆ ನೀಡಿರುವ ಜಮೀನು ಉಪಯೋಗವಾಗಿಲ್ಲ. ಯಾವ ಉದ್ದೇಶಕ್ಕೆ ಪಡೆಯಲಾಗಿದೆಯೋ ಆ ಉದ್ದೇಶಕ್ಕೆ ಬಳಕೆಯಾಗಿಲ್ಲ. ಕೈಗಾರಿಕೆ ಸ್ಥಾಪನೆಗೆ ಬದಲಾಗಿ ಬಡಾವಣೆ, ರೆಸಾರ್ಟ್​, ಕಲ್ಯಾಣ ಮಂಟಪವಾಗುತ್ತಿದೆ. ಈ ಶ್ವೇತಪತ್ರ ಹೊರಡಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು. ಕೆಆರ್​ಐಡಿಬಿಯಿಂದ ಕೈಗಾರಿಕೆ ಪ್ರದೇಶಕ್ಕೆಂದು ಪಡೆದ ಜಮೀನು ಸಂಬಂಧ ಹೋರಾಟ ಮಾಡಲಾಗುವುದು ಎಂದು ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ತಿಪ್ಪಗೊಂಡನಹಳ್ಳೀ ಜಲಾಶಯ ಪುನಶ್ಚೇತನಗೊಳಿಸಿ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್​ ಮಾತನಾಡಿದರು. ಸಂದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್​, ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಚಂದ್ರಶೇಖರ್​, ಚೀಲೂರು ಮುನಿರಾಜು, ನಗರ ಕಾರ್ಯದರ್ಶಿ ಗಂಗಣ್ಣ, ಅಧ್ಯಕ್ಷ ರಾಘವೇಂದ್ರ, ರವಿಕುಮಾರ್​, ನಿಂಗಪ್ಪ, ಶಿವಲಿಂಗಯ್ಯ, ಬುಡೇನ್​ ಸಾಬ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net