ಗುಂಪು ಮನೆಗೆ ಇನ್ನೂ ಸಿಗದ ಅನುಮೋದನೆ

cf23d35ba70df7d9f7b8797216e642c0
Published on

ಮಂಜುನಾಥ ಟಿ.ಭೋವಿ ಮೈಸೂರು

ಸೂರಿನ ಆಸರೆ ಕಲ್ಪಿಸುವ ಬಹುಮಹಡಿ ಗುಂಪು ವಸತಿ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆಯುತ್ತಿಲ್ಲ. ಇದರಿಂದಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಹತ್ವಾಕಾಂಕ್ಷಿ ಯೋಜನೆ ನನೆಗುದಿಗೆ ಬಿದ್ದಿದೆ. ಗಗನಚುಂಬಿ ವಸತಿ ಸಮುಚ್ಛಯದಲ್ಲಿ ಪ್ಲಾಟ್ ಖರೀದಿ ಮಾಡಿ ವಾಸ ಮಾಡಬೇಕೆಂಬ ಆಕಾಂಕ್ಷಿಗಳ ಆಸೆ ಇನ್ನೂ ಈಡೇರುತ್ತಿಲ್ಲ. ಬಾಡಿಗೆ ಮನೆಯ ವಾಸವೂ ತಪ್ಪಿಲ್ಲ. ಈ ಎಲ್ಲದರಿಂದಾಗಿ ಅವರಲ್ಲಿ ನಿರಾಶೆ ಮೂಡಿದೆ.

ಪ್ರಸ್ತಾವನೆ ಸಲ್ಲಿಕೆ:
ಸ್ವಾಧೀನಪಡಿಸಿಕೊಂಡ ಭೂಮಿ ಲಭ್ಯತೆ ಮುಡಾ ಬಳಿ ಇಲ್ಲ. ಹೀಗಾಗಿ, ಯಾವುದೇ ಹೊಸ ಬಡಾವಣೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಆದರೆ, ನಿವೇಶನ, ಮನೆಗಳ ಬೇಡಿಕೆ ಮಾತ್ರ ಗಗನಮುಖಿಯಾಗಿದೆ. ಮುಡಾದಿಂದ ರಚಿತವಾದ ವಿಜಯನಗರ, ದಟ್ಟಗಳ್ಳಿ ಬಡಾವಣೆಗಳಲ್ಲಿ ಗುಂಪು ವಸತಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಾಗ ಕಾಯ್ದಿರಿಸಲಾಗಿದೆ. ಅಲ್ಲಿ ತಲಾ 2 ಕೊಠಡಿಯ 952 ಮನೆ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದಕ್ಕೆ ಹಸಿರು ನಿಶಾನೆ ದೊರೆತಿಲ್ಲ.
ಯೋಜನೆ ಸಕಾರಗೊಳ್ಳುತ್ತಿಲ್ಲ
ಈ ಯೋಜನೆಗೆ ಅಂದಾಜು 298 ಕೋಟಿ ರೂ. ಬೇಕಾಗಿದೆ. ಈ ಪೈಕಿ ಮನೆ ನಿರ್ಮಿಸಿ ಹಂಚಿಕೆ ಮಾಡಿದ ನಂತರ ಮುಡಾಕ್ಕೆ 550 ಕೋಟಿ ರೂ. ಸಂದಾಯ ಆಗುವ ನಿರೀಕ್ಷೆ ಇದೆ. ಜತೆಗೆ, 2022-2023ನೇ ಮುಡಾ ಬಜೆಟ್‌ನಲ್ಲಿ ಯೋಜನೆಗೆ ಅಗತ್ಯವಾದ 100 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಅನುಮೋದನೆ ಮಾತ್ರ ಇನ್ನೂ ಸಿಕ್ಕಿಲ್ಲ. ಇದರಿಂದ ಯೋಜನೆಯೂ ಸಕಾರಗೊಳ್ಳುತ್ತಿಲ್ಲ. ಜನರಿಗೆ ಸೂರು ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ.

ತಾಂತ್ರಿಕ ಕಾರಣಗಳು ಅಡ್ಡಿ:
ಯೋಜನೆ ಅನುಮೋದನೆಗೆ ಕೆಲ ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ. ಎಷ್ಟು ಮಹಡಿ ನಿರ್ಮಿಸಬೇಕು, ಸುದೀರ್ಘ ಕಾಲ ಬಳಕೆ ಕುರಿತು ಕೆಲ ಆಕ್ಷೇಪಗಳು ವ್ಯಕ್ತವಾಗಿವೆ. ರಸ್ತೆಗೆ ಬಿಟ್ಟಿರುವ ಜಾಗದ ಕುರಿತು ತರಕಾರು ಎತ್ತಲಾಗಿದೆ. ಈ ಕಾರಣದಿಂದಲೇ ಸರ್ಕಾರದಿಂದ ಒಪ್ಪಿಗೆ ಸಿಗುವುದು ತಡವಾಗಿದೆ.
ವಿಜಯನಗರ, ದಟ್ಟಗಳ್ಳಿ ಬಡಾವಣೆಯಲ್ಲಿ ಉದ್ದೇಶಿಸಿರುವ ಗುಂಪು ವಸತಿ ಯೋಜನೆಗಳಲ್ಲಿ ಒಂದಕ್ಕೆ ಮಾತ್ರ ಅನುಮತಿ ನೀಡಿ, ಇನ್ನೊಂದನ್ನು ತಡೆಹಿಡಿಯಲು ಮುಂದಾಗಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಸಮಾಲೋಚಿಸಲಾಗಿದೆ. ಇಷ್ಟರ ಮೇಲೆಯೂ ಏನು ಮಾಡುತ್ತಾರೋ ಕಾದು ನೋಡಬೇಕಿದೆ ಎಂದು ಮುಡಾದ ಮೂಲಗಳು ತಿಳಿಸಿವೆ.

ಸ್ಪಷ್ಟ ಸ್ವರೂಪ ಸಿಗುತ್ತಿಲ್ಲ:
ಸಾರ್ವಜನಿಕ ವಲಯದಿಂದಲೂ ಈ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಪ್ರಸ್ತಾಪವಾದ ಕೂಡಲೇ ಮೈಸೂರಿನ ಸಾವಿರಾರು ಜನರು ಸಂತಸ ವ್ಯಕ್ತಪಡಿಸಿದ್ದರು. ಸೂರಿಗಾಗಿ 45 ಸಾವಿರ ಅರ್ಜಿ ಸಲ್ಲಿಕೆಯಾಗಿವೆ. ಇವರೆಲ್ಲ ಬೆಂಗಳೂರಿನ ಬಿಡಿಎ ಮಾದರಿ ಮೈಸೂರಲ್ಲೂ ಬಹು ಮಹಡಿಗಳ ಕಟ್ಟಡ ನಿರ್ಮಾಣವಾಗುತ್ತದೆಂದು ಕನಸು ಕಂಡಿದ್ದಾರೆ. ಎಲ್ಲ ಮೂಲಸೌಲಭ್ಯಗಳೂ ಇರುವ ಸ್ಥಳದಲ್ಲೇ ದೊರೆಯುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬ ಅಪೇಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ವರ್ಷಗಳು ಉರುಳಿದರೂ ಯೋಜನೆಗೆ ಸ್ಪಷ್ಟ ಸ್ವರೂಪ ಸಿಗುತ್ತಿಲ್ಲ. ಸರ್ಕಾರದ ಬಳಿ ನಿಖರ ಮಾರ್ಗಸೂಚಿ ಇಲ್ಲದ ಕಾರಣ ನನೆಗುದಿಗೆ ಬಿದ್ದಿದೆ.

35 ಸಾವಿರ ಜನರಿಂದ ಅಭಿಪ್ರಾಯ ಸಂಗ್ರಹ:
ಯೋಜನೆ ಕುರಿತು ಈಗಾಗಲೇ ಸಮೀಕ್ಷೆ ಮಾಡಲಾಗಿದೆ. 1 ಬಿಎಚ್‌ಕೆ ಮನೆಗೆ 16 ಲಕ್ಷ ರೂ., 2 ಬಿಎಚ್‌ಕೆ (5.34 ಚದರ) ಮನೆಗೆ 29 ಲಕ್ಷ ರೂ. ಹಾಗೂ 2 ಬಿಎಚ್‌ಕೆ (5.64 ಚದರ) ಮನೆಗೆ 33 ಲಕ್ಷ ರೂ. ಡಿಮ್ಯಾಂಡ್ ಸಮೀಕ್ಷೆ ಮಾಡಲಾಗಿದೆ. ಈ ಬಗ್ಗೆ 35 ಸಾವಿರಕ್ಕೂ ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
ವಿಜಯನಗರ 2ನೇ ಹಂತದ ರಿಂಗ್‌ರಸ್ತೆ ಬಳಿ 4 ಎಕರೆ ಜಾಗದಲ್ಲಿ 560 ಮನೆ, ದಟ್ಟಗಳ್ಳಿಯ 3.08 ಎಕರೆ ಜಾಗದಲ್ಲಿ 392 ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ. ಬಡಾವಣೆಗಳು ರಿಂಗ್ ರಸ್ತೆ ಒಳಗಿನ ಜನವಸತಿ ಪ್ರದೇಶವಾಗಿದ್ದು, ಈ ಯೋಜನೆಗೆ ಸೂಕ್ತ ಸ್ಥಳವಾಗಿದೆ. ಮೂಲಸೌಕರ್ಯ, ಸೋಲಾರ್ ಅಳವಡಿಸಿ ಎನರ್ಜಿ ಉಳಿತಾಯ, ನೀರಿನ ನಿರ್ವಹಣೆ, ತ್ಯಾಜ್ಯ ವಿಲೇವಾರಿಗೆ ಸೂಕ್ತ ವಿಧಾನ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಗುಂಪು ಮನೆ ನೆಚ್ಚಿಕೊಂಡಿರುವ ಜನರು:
ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮೈಸೂರಿನಲ್ಲಿ ನಿವೇಶನ, ಮನೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬೆಂಗಳೂರಿನ ಮಧ್ಯಮ ವರ್ಗದ ಜನರು ಸಾಂಸ್ಕೃತಿಕ ನಗರಿಯಲ್ಲಿ ಭೂಮಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಬೇಡಿಕೆಯೊಂದಿಗೆ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಮಧ್ಯಮ ವರ್ಗ, ಬಡವರಿಗೆ ನಿವೇಶನ, ಮನೆ ಖರೀದಿ ಮಾಡಲು ಆರ್ಥಿಕ ಸಾಮರ್ಥ್ಯವಿಲ್ಲ. ಅವರೆಲ್ಲ ಈ ಗುಂಪು ಮನೆಯನ್ನು ನೆಚ್ಚಿಕೊಂಡಿದ್ದಾರೆ.

ಪರ್ಯಾಯ ಪರಿಹಾರ:
ಮೈಸೂರಲ್ಲಿ ಕನಸಿನ ಮನೆ ಕಟ್ಟಿಕೊಳ್ಳಬೇಕೆಂಬ ಹಂಬಲದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸುಮಾರು 1 ಲಕ್ಷ ಜನರು ನಿವೇಶನ ಕೋರಿ ಅರ್ಜಿ ಸಲ್ಲಿಸಿ ಸುಮಾರು 20 ವರ್ಷಗಳಿಂದ ಕಾಯುತ್ತಿದ್ದಾರೆ. ಆ ಪೈಕಿ ಕೆಲವರು ಮೃತಪಟ್ಟಿದ್ದಾರೆ. ಮೈಸೂರಲ್ಲಿ ಒಂದು ನಿವೇಶನ ಹೊಂದಬೇಕೆಂಬ ಬಯಕೆಯೂ ಅವರೊಂದಿಗೆ ಸತ್ತುಹೋಗಿದೆ. ಜಾಗದ ಕೊರತೆಯಿಂದಾಗಿ ಮುಡಾದಿಂದ ಹೊಸದಾಗಿ ಬಡಾವಣೆ ನಿರ್ಮಿಸಲು ಆಗುತ್ತಿಲ್ಲ. ಆದ್ದರಿಂದ ಅರ್ಜಿದಾರರ ಬೇಡಿಕೆ ಪೂರೈಸಲು ಗುಂಪು ಮನೆ ಯೋಜನೆಯೊಂದೇ ಪರ್ಯಾಯ ಮಾರ್ಗವಾಗಿದೆ. ಆದರೆ, ತ್ವರಿತಗತಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರುತ್ತಿಲ್ಲ.

ಖಾಸಗಿ ಬಡಾವಣೆಗಳಿಗೆ ಅನುಮೋದನೆ, ಅರ್ಪಾಮೆಂಟ್‌ಗಳಿಗೆ ನಕ್ಷೆ ಅನುಮೋದಿಸಲು ಆಸಕ್ತಿ ತೋರುವ ಮುಡಾ, ಗುಂಪು ಮನೆ ನಿರ್ಮಿಸಲು ಆಸಕ್ತಿ ವಹಿಸುತ್ತಿಲ್ಲ ಎಂಬುದು ಅಚ್ಚರಿಯೇ ಸರಿ.

ಕೆಲ ತಾಂತ್ರಿಕ ಕಾರಣದಿಂದ ಬಹುಮಹಡಿ ಗುಂಪು ವಸತಿ ಯೋಜನೆಗೆೆ ಇನ್ನೂ ಸರ್ಕಾರದಿಂದ ಅನುಮತಿ ದೊರೆತಿಲ್ಲ. ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.ಯಶಸ್ವಿ ಸೋಮಶೇಖರ್ಅಧ್ಯಕ್ಷ, ಮುಡಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net