ಗುಂಪು ಬಾಳೆ ಕೃಷಿ ಸರಳ ಸೂತ್ರ

01rajesh4
Published on

ಚಾಮರಾಜನಗರ: ಬಾಳೆ ಬೇಸಾಯ ಕ್ರಮಗಳಲ್ಲಿ ಒಂದಾಗಿರುವ ‘ಗುಂಪು ಬಾಳೆ ಕೃಷಿ ವಿಧಾನವನ್ನೇ ತಂದೆ ಮತ್ತು ಮಗ ಪ್ರಧಾನವನ್ನಾಗಿಸಿಕೊಂಡು ಗಮನ ಸೆಳೆದಿದ್ದಾರೆ. ಸಾವಯವ ಪದ್ಧತಿಯಲ್ಲಿ ವ್ಯವಸಾಯ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಚಾಮರಾಜನಗರ ತಾಲೂಕಿನ ಹರವೆ ಹೋಬಳಿ ವ್ಯಾಪ್ತಿಯ ಅರಳೀಕಟ್ಟೆ ಗ್ರಾಮದ ರೈತ ಸದಾಶಿವಪ್ಪ ಮತ್ತು ಮಗ ಸಂಜೀವ್‌ಕುಮಾರ್ ಗುಂಪು ಬಾಳೆ ಕೃಷಿ ವಿಧಾನವೇ ಆಸಕ್ತಿದಾಯಕವಾಗಿದೆ. ಗುಂಪು ಬಾಳೆ ಕೃಷಿ ಎಂದರೆ, ಮನೆಯ ಮುಂದೆಯೋ ಅಥವಾ ಹಿತ್ತಲಿನಲ್ಲಿ ನೆಟ್ಟ ಬಾಳೆ ಗಿಡದ ಬುಡದಲ್ಲಿ ಮತ್ತಷ್ಟು ಕಂದುಗಳು ಬೆಳೆದು ಒಂದರ ನಂತರ ಮತ್ತೊಂದು ಗಿಡ ಲ ಕೊಡುತ್ತಿದ್ದ ಸರಳ ವಿಧಾನ. ಕಡಿಮೆ ಅಂತರದಲ್ಲಿ ಹೆಚ್ಚು ಬಾಳೆ ಗಿಡ ನೆಡುವ ಬದಲು ಹೆಚ್ಚು ಅಂತರದಲ್ಲಿ ಕಡಿಮೆ ಬಾಳೆ ಗಿಡ ನೆಟ್ಟು ನಿರಂತರ ಆದಾಯ ಗಳಿಸುವುದಾಗಿದೆ. ತಂದೆ ಸದಾಶಿವಪ್ಪ ಮತ್ತು ಮಗ ಸಂಜೀವ್‌ಕುಮಾರ್ ಜಮೀನಿಗೆ ಭೇಟಿ ನೀಡಿದವರಿಗೆ ಗುಂಪು ಬಾಳೆ ಕೃಷಿ ವಿಧಾನದ ಬಗ್ಗೆ ತಿಳಿಯುತ್ತದೆ.

ಗ್ರಾಮದಲ್ಲಿ ಸುಮಾರು 2.5 ಎಕರೆ ಜಮೀನಿನಲ್ಲಿ ಸುಮಾರು 150 ಬಾಳೆ ಗುಂಪು ಇವೆ. ಮೂರು ವರ್ಷಗಳ ಹಿಂದೆ ನೆಟ್ಟ ಒಂದೊಂದು ಕಂದು ಇಷ್ಟು ಗಿಡಗಳ ಹುಟ್ಟಿಗೆ ಕಾರಣವಾಗಿವೆ. ಅರ್ಧ ಅಡಿ ಗುಂಡಿ ತೋಡಿ ಅದರೊಳಗೆ ತಿಪ್ಪೆ ಗೊಬ್ಬರ ಹಾಕಿ ಏಲಕ್ಕಿ ಬಾಳೆ ಕಂದು ನೆಟ್ಟಿದ್ದರು. ಈ ಗಿಡದ ಸುತ್ತ 10 ಅಡಿ ಉದ್ದ, 20 ಅಡಿ ಅಗಲ ಜಾಗ ಬಿಟ್ಟು ಮತ್ತೊಂದು ಕಂದು ಬಿತ್ತಿದ್ದರು. ಹೀಗೆ ದೂರ ದೂರದಲ್ಲಿ ಒಂದೊಂದು ಗಿಡ ನೆಟ್ಟು ಇದರ ಬುಡದಲ್ಲೇ ಬೆಳೆಯುವ ಮರಿ ಕಂದುಗಳನ್ನು ಪೋಷಿಸಿ ನಾಲ್ಕೈದು ಬಾಳೆ ಗಿಡಗಳು ಒಂದೇ ಕಡೆ ಬೆಳೆಸಿ ಗುಂಪು ಬಾಳೆ ಕೃಷಿ ಮಾಡುತ್ತಿದ್ದಾರೆ. ತಾಯಿ ಬಾಳೆ ಲ ನೀಡುವ ಸ್ವಲ್ಪ ತಿಂಗಳಿಗೆ ಮರಿ ಕಂದುಗಳ ಬೆಳೆದು ಗೊನೆ ಬಿಡುತ್ತಿವೆ. ಇದರಿಂದ ರೈತರಾದ ತಂದೆ ಮತ್ತು ಮಗನಿಗೆ ನಿರಂತರವಾಗಿ ಆದಾಯ ಲಭಿಸುತ್ತಿದೆ.

ಗುಂಪು ಬಾಳೆ ಕೃಷಿಯೊಂದಿಗೆ ತೆಂಗಿನ ಮರಗಳನ್ನೂ ಬೆಳೆಸಿದ್ದಾರೆ. 100 ತೆಂಗಿನ ಮರಗಳು ಇವೆ. ಇದರ ನಡುವೆ ಪರಂಗಿ ಗಿಡಗಳನ್ನು ಹಾಕಿದ್ದಾರೆ. ಕರಿ ಮೆಣಿಸಿನ ಬಳ್ಳಿಯೂ ಹಬ್ಬಿದೆ. ಒಂದಲಗ ಸೊಪ್ಪು ನೆಲದ ತುಂಬೆಲ್ಲಾ ಹರಡಿದೆ. ಗೆಣಸು ಬೆಳೆದಿದ್ದಾರೆ. ಹಸುಗಳನ್ನು ಸಾಕಿದ್ದು, ಇವುಗಳಿಗೆ ಮೇವು ಒದಗಿಸುವ ಸಲುವಾಗಿ ಮುಸುಕಿನ ಜೋಳ ಹಾಕಿದ್ದಾರೆ.

ಸಾವಯವ ವಿಧಾನದಲ್ಲಿ ಕೃಷಿ:

ರೈತರಾದ ಸದಾಶಿವಪ್ಪ ಮತ್ತು ಮಗ ಸಂಜೀವಕುಮಾರ್ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿದ್ದಾರೆ. ಬಾಳೆ, ತೆಂಗು, ಪರಂಗಿ, ಮುಸುಕಿನ ಜೋಳಕ್ಕೆ ಜೀವಾಮೃತ ನೀಡುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಈವರೆಗೂ ಸಹ ರಾಸಾಯನಿಕ ಔಷಧಿಗಳನ್ನು ಬಳಕೆ ಮಾಡಿಲ್ಲ. ವಿಷ ಮುಕ್ತ ಆಹಾರ ಬೆಳೆಯಬೇಕೆಂಬ ಉದ್ದೇಶದಿಂದ ಹಲವು ವರ್ಷಗಳಿಂದ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿದ್ದಾರೆ. ಬೆಳೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೊಳೆಸಿ ಅದನ್ನೇ ಗೊಬ್ಬರ ಮಾಡುತ್ತಿದ್ದಾರೆ. ತೆಂಗಿನ ಗರಿ, ಬಾಳೆ ಗೊನೆ, ಎಲೆ, ತೆಂಗಿನ ಕಾಯಿಯ ಸಿಪ್ಪೆ ಬಿದ್ದ ಜಾಗದಲ್ಲೇ ಬಿದ್ದು ಕೊಳೆತು ಗೊಬ್ಬರವಾಗುತ್ತಿದೆ. ಭೂಮಿಯ ಮಣ್ಣು ಲವತ್ತತೆಯಿಂದ ಕೂಡಿದೆ.

ಜೀವಾಮೃತದ ಹೊಂಡ:

ಜಮೀನಿನಲ್ಲಿ 40 ಅಡಿ ಉದ್ದ, 40 ಅಡಿ ಅಗಲ, 10 ಅಡಿ ಆಳದ ಕೃಷಿ ಹೊಂಡವನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಲ್ಲಿರುವ ನೀರಿಗೆ ಹಸುವಿನ ಗಂಜಲ, ಜೀವಾಮೃತ, ಸಗಣಿ ಹಾಕಿ ಮೋಟಾರ್ ಮೂಲಕ ಬೆಳೆಗಳಿಗೆ ಹಾಯಿಸುತ್ತಿದ್ದಾರೆ. ವಾರಕ್ಕೆ ಎರಡು ಡ್ರಮ್‌ನಲ್ಲಿ ತಯಾರಿಸಿದ ಜೀವಾಮೃತವನ್ನು ನೀರಿನ ಹೊಂಡಕ್ಕೆ ಸುರಿಯುತ್ತಿದ್ದಾರೆ. ದೊಡ್ಡ ಪೈಪ್‌ಗಳ ಮೂಲಕ ನೀರು ಹಾಯಿಸುತ್ತಿದ್ದಾರೆ. ಟ್ರ್ಯಾಕ್ಟರ್, ಜೆಸಿಬಿಯನ್ನು ಇಟ್ಟುಕೊಂಡಿದ್ದಾರೆ. ಕೃಷಿ ಇಲಾಖೆಯಿಂದ ಮರ ಹತ್ತುವ ಯಂತ್ರವನ್ನು ಪಡೆದಿರುವುದು ಬಿಟ್ಟರೆ, ಬೇರೆ ಯಾವ ಯೋಜನೆಗಳನ್ನೂ ಈ ರೈತ ಬಳಸಿಕೊಂಡಿಲ್ಲ.

ಎರೆಹುಳು ಗೊಬ್ಬರ ತಯಾರಿಕೆ:

ಜಮೀನಿನಲ್ಲೇ ಎರೆಹುಳು ಗೊಬ್ಬರ ತಯಾರು ಮಾಡಿಕೊಳ್ಳುತ್ತಿದ್ದಾರೆ. ಜಮೀನಿನ ಕೊಟ್ಟಿಗೆ ಬಳಿ ತಾತ್ಕಾಲಿಕವಾಗಿ ಟಾರ್ಪಲ್ ಹೊದಿಸಿದ ತೊಟ್ಟಿಯಲ್ಲಿ ಎರೆಹುಳು ಗೊಬ್ಬರ ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ. ಈ ಗೊಬ್ಬರವನ್ನು ಬೆಳೆಗೆ ಹಾಕುತ್ತಿದ್ದಾರೆ. ಜಮೀನಿನ ಮಣ್ಣು ಲವತ್ತತೆಯಿಂದ ಕೂಡಿರಲು ಇದೂ ಕೂಡ ಕಾರಣವಾಗಿದೆ.

ಯೂಟ್ಯೂಬ್ ಗುರು: ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿರುವ ಸದಾಶಿವಪ್ಪ ಮತ್ತು ಸಂಜೀವ್‌ಕುಮಾರ್ ಯೂಟ್ಯೂಬ್‌ನಲ್ಲಿ ಸಾವಯವ ಕೃಷಿಯ ವಿಡಿಯೋಗಳನ್ನು ನೋಡಿ ತಾವೂ ಪ್ರಯೋಗ ಮಾಡುತ್ತಿದ್ದಾರೆ. ಇಂತಹ ರೈತರಿಗೆ ಕೃಷಿ ಇಲಾಖೆ, ಕೃವಿ ವಿಜ್ಞಾನ ಕೇಂದ್ರಗಳಿಂದ ಉತ್ತಮ ಮಾರ್ಗದರ್ಶನ ದೊರೆತರೆ ಮಾದರಿ ಕೃಷಿಕರಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದ್ದಾರೆ.

ನಮ್ಮ ಹಿರಿಯರ ಕಾಲದಲ್ಲಿ ಕಳೆ ನಾಶಕಗಳು, ರಾಸಾಯನಿಕ ಔಷಧಿ, ಗೊಬ್ಬರಗಳೇ ಇರಲಿಲ್ಲ. ಅವರು ಆರೋಗ್ಯಕರ ಆಹಾರ ಬೆಳೆಯುತ್ತಿದ್ದರು. ಆದರೆ ಈಗ ಹಣ ಮಾಡಲು ಹೋಗಿ ರಾಸಾಯನಿಕಗಳನ್ನು ಬಳಕೆ ಮಾಡಿ ಆರೋಗ್ಯ ಕೆಡುತ್ತಿದೆ. ಮಣ್ಣಿನ ಲವತ್ತತೆ ಕಡಿಮೆಯಾಗಿ, ಜೀವಾಣುಗಳು ಸಾಯುತ್ತಿವೆ. ವಿಷ ಮುಕ್ತ ಆಹಾರ ಬೆಳೆಯುವ ಉದ್ದೇಶದಿಂದ ಸಾವಯವ ವಿಧಾನದಲ್ಲಿ ಗುಂಪು ಬಾಳೆ ಬೆಳೆಯುತ್ತಿದ್ದೇವೆ. ಸದಾಶಿವಪ್ಪ, ರೈತ, ಅರಳೀಕಟ್ಟೆ, ಚಾಮರಾಜನಗರ ಗುಂಪು ಬಾಳೆ ಕೃಷಿ ಸುಲಭ ಮತ್ತು ಸರಳ ವಿಧಾನವಾಗಿದೆ. ಇದಕ್ಕೆ ಅಧಿಕ ಶ್ರಮದ ಅಗತ್ಯವಿಲ್ಲ. ಹೆಚ್ಚು ಸಮಯ ಕೊಡಬೇಕಾಗಿಲ್ಲ. ಒಬ್ಬರೇ ಕೃಷಿ ಮಾಡಿಕೊಂಡು ಹೋಗಬಹುದು. ನಾವು ಬೇರೆ ಕೆಲಸಗಳನ್ನೂ ಮಾಡಿಕೊಳ್ಳಬಹುದು. ಹೀಗಾಗಿ ಈ ವಿಧಾನ ಹೆಚ್ಚು ಉಪಯೋಗಕಾರಿಯಾಗಿದೆ. ಸಂಜೀವ್‌ಕುಮಾರ್, ರೈತ ಅರಳೀಕಟ್ಟೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net