ಗುಂಪು ಘರ್ಷಣೆ, 8 ಜನರ ಬಂಧನ

Crime Logo
Published on

ಹುಬ್ಬಳ್ಳಿ: ಇಲ್ಲಿನ ಗೌಳಿ ಗಲ್ಲಿಯಲ್ಲಿ ಬುಧವಾರ ರಾತ್ರಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.

ಪರಶುರಾಮ ಉಪ್ಪಾರ, ಮಂಜುನಾಥ ಅಂಬಿಗೇರ, ಶ್ರೀನಿವಾಸ ಮೆಣದಾಲ, ರಾಮು ಉಪ್ಪಾರ, ವೆಂಕಟೇಶ ಬಳ್ಳಾರಿ, ನರಸಿಂಗ ಪೊಂಗಡವಾಲೆ, ಗಣೇಶ ಪೊಂಗಡವಾಲೆ, ಮಹೇಶ ಪೊಂಗಡವಾಲೆ ಬಂಧಿತ ಆರೋಪಿಗಳು. ಎರಡು ಗುಂಪುಗಳ ನಡುವೆ ಈ ಹಿಂದೆ ಜಗಳ ನಡೆದಿತ್ತು. ರಾತ್ರಿ ಬೈಕ್, ಆಟೋ ರ್ಪಾಂಗ್ ಮಾಡುವ ವಿಚಾರಕ್ಕೆ ಜಗಳ ಏರ್ಪಟ್ಟಿತ್ತು.

ಆರೋಪಿಗೆ ಕರೊನಾ: ಬಂಧಿತ 8 ಆರೋಪಿಗಳಲ್ಲಿ ಒಬ್ಬನಿಗೆ ಕರೊನಾ ಪಾಸಿಟಿವ್ ಬಂದಿದೆ. ಈ ಹಿಂದೆ ಮಾರ್ಚ್​ನಲ್ಲಿ ಕಳ್ಳತನ ಆರೋಪಿಯೊಬ್ಬನಿಗೆ ಪಾಸಿಟಿವ್ ದೃಢಪಟ್ಟಿತ್ತು. ಆತನಿಂದ ಉಪನಗರ ಠಾಣೆಯ 15 ಸಿಬ್ಬಂದಿಗೆ ಸೋಂಕು ತಗುಲಿತ್ತು. ಇದೀಗ ಮತ್ತೋರ್ವ ಆರೋಪಿಗೆ ಸೋಂಕು ತಗುಲಿರುವುದು ಠಾಣೆಯ ಅಧಿಕಾರಿ, ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಾರು ಡಿಕ್ಕಿಯಾಗಿ ಮಹಿಳೆ ಸಾವು

ಧಾರವಾಡ: ನಗರ ಹೊರವಲಯದ ಬೇಲೂರು ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸಿ ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಗುರುವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತಾಲೂಕಿನ ತೇಗೂರ ಗ್ರಾಮದ ಅಕ್ಕಮ್ಮ ಮೃತ ಮಹಿಳೆ. ಗಾಯಗೊಂಡ ಮೂವರನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡದಿಂದ ಬೆಳಗಾವಿಯತ್ತ ಹೊರಟಿದ್ದ ಕಾರು ಚಾಲಕ, ನಿಯಂತ್ರಣ ಕಳೆದುಕೊಂಡು ಮಹಿಳೆಯರತ್ತ ಚಲಾಯಿಸಿದ್ದಾನೆ. ಈ ವೇಳೆ ಅಕ್ಕಮ್ಮ ತಪ್ಪಿಸಿಕೊಳ್ಳಲಾಗದೆ ಕಾರು ಬಡಿದು ಸೇತುವೆ ಮೇಲಿಂದ ಸುಮಾರು 20 ಅಡಿ ಕೆಳಗೆ ಬಿದ್ದು ಸಾವಿಗೀಡಾಗಿದ್ದಾಳೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net