ಗುಂಡ್ಲುಪೇಟೆಯಲ್ಲಿ ಗೋವಿಂದ ನಾಮಸ್ಮರಣೆ

31-GPT-1
ಗುಂಡ್ಲುಪೇಟೆ ಪಟ್ಟಣದ ಅಭಯ ಆಂಜನೇಯಸ್ವಾಮಿ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
Published on

ಗುಂಡ್ಲುಪೇಟೆ: ತಾಲೂಕಿನಾದ್ಯಂತ ಮೊದಲನೇ ಶ್ರಾವಣ ಶನಿವಾರವನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಮಹಿಳೆಯರು ಮನೆಗಳನ್ನು ಶುಚಿಗೊಳಿಸಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬಸಮೇತ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಕ್ಕಳು ಗೋವಿಂದನಾಮ ಸ್ಮರಣೆ ಮಾಡುತ್ತ ಅಂಗಡಿ ಬೀದಿಗಳಲ್ಲಿ ಭಿಕ್ಷೆ ಮಾಡಿದರು. ಪುರುಷರು ನಾನಾ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಅಭಯ ಆಂಜನೇಯಸ್ವಾಮಿ ಹಾಗೂ ನವಗ್ರಹ ದೇವಾಲಯದಲ್ಲಿನ ಮೂರ್ತಿಗಳಿಗೆ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಪೀಡಾಪರಿಹಾರಕ್ಕಾಗಿ ನವಧಾನ್ಯಗಳನ್ನು ದಾನಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು. ಪಟ್ಟಣ ಸೇರಿದಂತೆ ನಾನಾ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು.

ಬಂಡೀಪುರ ಹುಲಿಯೋಜನೆಯ ಅರಣ್ಯ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿತು. ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸಿದ್ದರಿಂದ ದೇವಸ್ಥಾನಕ್ಕೆ ಹೋಗಲು ಗಂಟೆಗಟ್ಟಲೆ ಕಾಯುವಂತಾಗಿತ್ತು. ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net