

ಗುಂಡ್ಲುಪೇಟೆ: ಪಟ್ಟಣ ಹಾಗೂ ವಿವಿಧೆಡೆ ಮುಸ್ಲಿಮರು ತ್ಯಾಗ-ಬಲಿದಾನ ಸಾರುವ ಬಕ್ರೀದ್ ಅನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಗುರುವಾರ ಬೆಳಗ್ಗೆ ಶ್ವೇತವಸ್ತ್ರ ಧರಿಸಿದ ಪುರುಷರು ಹಾಗೂ ಮಕ್ಕಳು ಪಟ್ಟಣದ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡು ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಧರ್ಮಗುರು ಜಾದೀರ್ ಹಜರತ್ ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮೂಲಕ ಹಬ್ಬದ ಮಹತ್ವ ತಿಳಿಸಿದರು.
ಈದ್ಗಾ ಮೈದಾನಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಭೇಟಿ ನೀಡಿ, ಮುಸ್ಲಿಮರಿಗೆ ಶುಭಾಶಯ ಕೋರಿದರು.