ಗುಂಡ್ಲುಪೇಟೆ ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನ

29-GPT-3A
Published on

ಗುಂಡ್ಲುಪೇಟೆ: ತಮ್ಮ ಐದು ವರ್ಷದ ಅವಧಿಯಲ್ಲಿ ಕ್ಷೇತ್ರವನ್ನು ಮಾರದಿಯನ್ನಾಗಿಸಲು ಶ್ರಮಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.


ಗುರುವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಖಾಸಗಿ ಸಂಸ್ಥೆಗಳೂ ಸಹ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ನೆರವು ನೀಡುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿ ಸಮರ್ಪಕ ತರಬೇತಿ ನೀಡುತ್ತಿವೆ. ತಾಲೂಕಿನಲ್ಲಿ ಉದ್ಯೋಗಾವಕಾಶಗಳಿದ್ದರೂ ಯುವಜನತೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಉದ್ಯೋಗ ಮೇಳ ಆಯೋಜಿಸಿ ಅರ್ಹರಿಗೆ ಉದ್ಯೋಗ ನೀಡಿದರೂ ಊರಿನಿಂದ ದೂರಕ್ಕೆ ಹೋಗಲು ಸಿದ್ಧರಿಲ್ಲ. ಜಿಲ್ಲೆಯಲ್ಲಿ ಐದು ಕಂಪನಿಗಳು ಆರಂಭವಾಗುತ್ತಿದ್ದು ಉತ್ತಮ ಉದ್ಯೋಗಾವಕಾಶ ದೊರಕಲಿದೆ. ಅಲ್ಲದೆ ಪಟ್ಟಣದಲ್ಲಿ ಗಾರ್ಮೆಂಟ್ಸ್ ಉದ್ಯಮ ಆರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತಾವು ಶ್ರಮಿಸುತ್ತಿದ್ದು ಸರ್ಕಾರದಿಂದ ಎಲ್ಲ ರೀತಿಯ ನೆರವು ಪಡೆಯಲಾಗುವುದು. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯಾವುದೇ ದೂರುಗಳು ಬಂದ ಕೂಡಲೇ ಕೇಸ್ ರಿಜಿಸ್ಟರ್ ಮಾಡದೆ ಸಾಧ್ಯವಾದ ಮಟ್ಟಿಗೆ ಸಂಧಾನ ಮಾಡುವುದು ಒಳ್ಳೆಯದು ಎಂದು ಸಲಗೆ ನೀಡಿದರು.

ಸಾಮಾಜಿಕ ಚಿಂತಕರಾದ ಡಾ ವಾಸು, ಡಾ ಕೃಷ್ಣಮೂರ್ತಿ ಚಮರಂ, ಸಾಹಿತಿ ಮಹಾದೇವ ಶಂಕನಪುರ, ಮುಖಂಡರಾದ ಅನಗಳ್ಳಿ ಬಸವರಾಜು, ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ, ಮಲ್ಲೇಶ್, ಉಲ್ಲಾಸ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net