ಗುಂಡ್ಲುಪೇಟೆ ತಾಲೂಕಿನಲ್ಲಿ ವಿಜಯಾನಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ

09-GPT-2A
Published on

ಗುಂಡ್ಲುಪೇಟೆ: ಶುಕ್ರವಾರ ತೆರೆಕಂಡ ಡಾ.ವಿಜಯ ಸಂಕೇಶ್ವರರ ಬಯೋಪಿಕ್ ವಿಜಯಾನಂದ ಚಲನಚಿತ್ರಕ್ಕೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


ಸೈಕ್ಲೋನ್ ಪರಿಣಾಮ ಬೆಳಗ್ಗಿನಿಂದ ಬೀಳುತ್ತಿದ್ದ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಜನರು ಮನೆಯಿಂದ ಹೊರಬರಲು ಹಿಂಜರಿದ ಪರಿಣಾಮ ಪಟ್ಟಣದ ಸೂರ್ಯ ಚಿತ್ರ ಮಂದಿರದಲ್ಲಿ ಬೆಳಗಿನ ಪ್ರದರ್ಶನ ರದ್ದುಗೊಳಿಸಿ ಮಧ್ಯಾಹ್ನದ ಪ್ರದರ್ಶನ ನಡೆಸಲಾಯಿತು.


ಹೊಸ ಚಿತ್ರವಾದ್ದರಿಂದ ವೀಕ್ಷಕರ ಸಂಖ್ಯೆ ಕಡಿಮೆಯಿದ್ದರೂ ಮಧ್ಯಾಹ್ನ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಚಿತ್ರ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.


ಮಧ್ಯಾಹ್ನದ ಶೋ ವೀಕ್ಷಿಸಿದ ವಿಜಯ ಸಂಕೇಶ್ವರರ ಅಭಿಮಾನಿ ಸೋಮಶೇಖರ್ ವಿಜಯವಾಣಿಯೊಂದಿಗೆ ಮಾತನಾಡಿ, ಕಾಯಕವೇ ಕೈಲಾಸ ಎನ್ನುವ ಮಾತನ್ನು ಹೀರೋ ನಿಹಾಲ್ (ವಿಜಯ ಸಂಕೇಶ್ವರ)ನಿಜ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ ನಿಷ್ಠೆಯಿಂದ ಅವಮಾನ ಮತ್ತು ಸವಾಲುಗಳನ್ನು ಎದುರಿಸಿ ಬೆಳೆದಿರುವುದು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಲಾಗಿದೆ. ಕನ್ನಡದ ಮಹಾನ್ ಸಾಧಕರೊಬ್ಬರ ಜೀವನ ಕಥೆ ಚಿತ್ರವಾಗಿ ಮೂಡಿಬಂದಿರುವುದು ಹೆಮ್ಮೆ ವಿಷಯ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ ಮನುಷ್ಯ ಹೇಗೆ ಗುರಿ ಮುಟ್ಟಬೇಕು ಎಂಬುದು ಯುವ ಜನತೆಗೆ ಸ್ಫೂರ್ತಿ ಹಾಗೂ ಪ್ರೇರಣೆ ನೀಡಲಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಚಿತ್ರ ತೋರಿಸಿದರೆ ಉತ್ತಮ ಸಂದೇಶ ದೊರಕಲಿದೆ. ನಿಜವಾಗಿಯೂ ತೆರೆಯ ಮೇಲೆ ಹಾಗೂ ನಿಜ ಜೀವನದಲ್ಲಿ ವಿಜಯ ಸಂಕೇಶ್ವರ ಅವರು ಹೀರೋ ಆಗಿದ್ದಾರೆ. ವಿಆರ್‌ಎಲ್ ಪ್ರೊಡಕ್ಷನ್ ಮುಂದೆ ಮತ್ತಷ್ಟು ಯುವ ಜನತೆಗೆ ದಾರಿದೀಪವಾಗುವ ಚಿತ್ರಗಳನ್ನು ನಿರ್ಮಿಸಲಿ ಎಂದು ಹಾರೈಸಿದರು.

ಗುಂಡ್ಲುಪೇಟೆ ಪಟ್ಟಣದ ಸೂರ್ಯ ಚಿತ್ರಮಂದಿರದಲ್ಲಿ ವಿಜಯ ಸಂಕೇಶ್ವರರ ಬಯೋಪಿಕ್ ಸಿನಿಮಾ ವಿಜಯಾನಂದ ವೀಕ್ಷಣೆಗೆ ಆಗಮಿಸಿದ್ದ ಯುವಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net