

ಗುಂಡ್ಲುಪೇಟೆ: ಪಟ್ಟಣದ ಉದ್ಯಮಿಯೊಬ್ಬರ ಮನೆಯಲ್ಲಿ ಭಾನುವಾರ ಯಾರೂ ಇಲ್ಲದಿರುವ ಮಾಹಿತಿ ಪಡೆದ ಕಳ್ಳರು ಲಕ್ಷಾಂತರ ರೂ., ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಪಟ್ಟಣದ ಮದ್ದಾನೇಶ್ವರ ಮಹಾಮನೆಗೆ ಹೊಂದಿಕೊಂಡಿರುವ ಉದ್ಯಮಿ ಉಮೇಶ್ ತಮ್ಮ ಕುಟುಂಬದವರೊಂದಿಗೆ ಮೈಸೂರಿಗೆ ತೆರಳಿದ್ದರು. ತಮ್ಮ ಮನೆಯ ಮುಂಬಾಗಿಲಿಗೆ ಕಬ್ಬಿಣದ ಗ್ರಿಲ್ ಅಳವಡಿಸಿದ್ದರೂ ರಾತ್ರಿ ವಾಪಸಾಗುವ ಕಾರಣಕ್ಕೆ ಬಾಗಿಲಿಗಷ್ಟೇ ಬೀಗ ಹಾಕಿದ್ದರು. ತಡರಾತ್ರಿ ಮನೆಗೆ ವಾಪಸಾದಾಗ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಸೋಮವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಶ್ವಾನದಳ ಹಾಗೂ ಬೆರಳಚ್ಚು ತಂಡದವರು ಕಳ್ಳರ ಪತ್ತೆಗೆ ಪ್ರಯತ್ನಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ದೂರು ಕೊಟ್ಟ ನಂತರ ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.