

ಗುಂಡ್ಲುಪೇಟೆ: ಮೂರು ದಶಕಗಳ ಹಿಂದೆ ಬತ್ತಿಹೋಗಿದ್ದ ಗುಂಡ್ಲು ನದಿ ಪುನಶ್ಚೇತನ ಅಭಿಯಾನಕ್ಕೆ ಯುವಜನತೆ ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟಿತ ಪ್ರಯತ್ನ ಆರಂಭಿಸಿದ್ದಾರೆ.
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಕಳೆದ ಒಂದು ವರ್ಷದಿಂದ ಅಭಿಯಾನ ನಡೆಸಿದ ಪರಿಣಾಮ ಜನತೆಯಲ್ಲಿ ಸಾಕಷ್ಟು ಅರಿವು ಮೂಡಿದೆ. ಹಂಗಳ ಹೋಬಳಿಯ ಕಲ್ಲುಕಟ್ಟೆ ಜಲಾಶಯ, ಹಿರೀಕೆರೆ , ದೊಡ್ಡಕೆರೆ, ಬೇರಂಬಾಡಿ ಕೆರೆ, ಕಣ್ಣೇಗಾಲ ಕೆರೆ, ಮಲ್ಲಯ್ಯನಪುರ ಕೆರೆ ನೀರು ವಿಜಯಪುರ ಅಮಾನಿ ಕೆರೆಯನ್ನು ತುಂಬಿಸಿ ಗುಂಡ್ಲು ನದಿ ಪಾತ್ರದಲ್ಲಿ ಹರಿದಿದೆ.
ಯುವ ಜನಾಂಗಕ್ಕೆ ನದಿ ಎಲ್ಲಿತ್ತು ಎಂಬುದೇ ಗೊತ್ತಿರಲಿಲ್ಲ. ಆದರೆ, ಈ ಬಾರಿ ಕೆರೆಗಳಿಗೆ ನದಿ ಮೂಲದಿಂದ ನೀರು ಹರಿಸಿದ ಹಾಗೂ ಉತ್ತಮ ಮಳೆಬಿದ್ದ ಪರಿಣಾಮ ಕೆರೆಕಟ್ಟೆಗಳು ಕೋಡಿ ಬಿದ್ದ ನೀರು ನದಿ ಪಾತ್ರದಲ್ಲಿ ಹರಿದಿದ್ದರಿಂದ ಭರವಸೆ ಮೂಡಿಸಿದೆ.
ಗುಂಡ್ಲು ನದಿ, ಗುಂಡ್ಲು ಪರಿಸರ ಬಳಗ, ಗುಂಡ್ಲು ಪರಿಸರ ಪರಿವಾರ, ನಮ್ಮ ಗುಂಡ್ಲುಪೇಟೆ ಮುಂತಾದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳ ಗುಂಪುಗಳನ್ನು ರಚಿಸಿಕೊಂಡಿದ್ದಾರೆ, ಈ ಗುಂಪುಗಳ ಮೂಲಕ ನದಿ ಪುನಶ್ಚೇತನಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.
ಪ್ರತಿ ಭಾನುವಾರ ಸಮಾನ ಮನಸ್ಕ ಯುವಕರು ಹಾಗೂ ಪರಿಸರಾಸಕ್ತರು ಸೇರಿ ನದಿ ಪಾತ್ರದಲ್ಲಿ ಶ್ರಮದಾನ ಆರಂಭಿಸಿದ್ದಾರೆ. ಪ್ರತಿ ಭಾನುವಾರವೂ ಬೆಳಗ್ಗೆ ಶ್ರಮದಾನ ಮಾಡುವ ಮೂಲಕ ಮೈಸೂರಿನ ಕುಕ್ಕರಹಳ್ಳಿ ಕೆರೆಯ ರೀತಿ ಪರಿಸರ ಸೃಷ್ಟಿಸಲು ಮುಂದಾಗಿದ್ದಾರೆ.
ವಿಜಯಪುರ ಅಮಾನಿ ಕೆರೆಯಿಂದ ಸಮೀಪದ ಚಿಕ್ಕಕೆರೆಗೆ ನೀರು ಹರಿಯುತ್ತಿದ್ದ ಮಾರ್ಗವನ್ನು ಮುಚ್ಚಿದ್ದರಿಂದ ದೊಡ್ಡ ಮಳೆಬಂದರೂ ಬರಿದಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರ ಗುಂಡ್ಲು ಪರಿಸರ ಬಳಗದ ಸದಸ್ಯರು ಚಿಕ್ಕಕೆರೆಯಲ್ಲಿ ಶ್ರಮದಾನ ಮಾಡುವ ಮೂಲಕ ಹೂಳೆತ್ತಿದರು. ಇದರಿಂದ ಅಮಾನಿ ಕೆರೆಯ ನೀರು ಸರಾಗವಾಗಿ ಹರಿದು ಚಿಕ್ಕಕೆರೆ ಒಡಲು ತುಂಬಿಕೊಳ್ಳುತ್ತಿದೆ.
ಮುಂದಿನ ಹಂತದಲ್ಲಿ ಕೆರೆಯ ಆವರಣದಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳ ನಡುವೆ ಗೂಡಿಕಟ್ಟಿರುವ ಹಾಗೂ ನಲಿದಾಡುವ ಹತ್ತಾರು ಪಕ್ಷಿಗಳನ್ನು ಗುರ್ತಿಸುವ ಮೂಲಕ ಪರಿಸರಾಸಕ್ತಿ ಬೆಳೆಸುತ್ತಿದ್ದಾರೆ.