ಗುಂಡಿಮಯವಾದ ಮಂಚೇನಹಳ್ಳಿ ರಸ್ತೆ

22222
Published on

ಶಿವು ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ- ಮಂಚೇನಹಳ್ಳಿ ಮಾರ್ಗದದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಜೀವ ಮುಷ್ಟಿಯಲ್ಲಿಡಿದು ಸಾಗುವ ಪರಿಸ್ಥಿತಿ ಎದುರಾಗಿದೆ, ತೂಬಗೆರೆ ಮುಖ್ಯರಸ್ತೆಯಿಂದ ದೊಡ್ಡತಿಮ್ಮನಹಳ್ಳಿ, ತುರವನಹಳ್ಳಿ ಚಿಕ್ಕಮದ್ದೇನಹಳ್ಳಿ, ದೊಡ್ಡ ಮುದ್ದೇನಹಳ್ಳಿ, ಮುಕ್ಕಡಿಘಟ್ಟ ಸೇರಿ ಇನ್ನು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಸುಮಾರು ಏಳು ಕಿಲೋಮೀಟರ್ ರಸ್ತೆಯಲ್ಲಿ ಡಾಂಬರು ಕಿತ್ತು ಬಂದಿದೆ, ಈ ಹಿಂದೆ ಹಾಕಿದ ಡಾಂಬರ್ ಕಿತ್ತು ಬಂದು ಜಲ್ಲಿ ಕಲ್ಲುಗಳು ಮೇಲೆದ್ದಿರುವುದರಿಂದ ದ್ವಿಚಕ್ರವಾಹನ ಸವಾರರು ಆಯತಪ್ಪಿ ಬೀಳುವುದು ಸಾಮಾನ್ಯವಾಗಿದೆ. ಇನ್ನು ರಸ್ತೆ ಉದ್ದಕ್ಕೂ ಡಾಂಬರು ಕಿತ್ತು ಬಂದಿರುವುದರಿಂದ ವಾಹನ ಸವಾರರು ಹಳ್ಳಗಳನ್ನು ತಪ್ಪಿಸಲು ಕಸರತ್ತು ನಡೆಸುತ್ತಾರೆ, ಒಂದು ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುವುದೂ ಸಾಮಾನ್ಯವಾಗಿದೆ, ಆಟೋಗಳಲ್ಲಿ ಸಂಚರಿಸುವ ಪ್ರಯಾಣಿಕರು ಆಟೋ ಪಲ್ಟಿಯಾಗುವುದೋ ಎಂಬ ಆತಂಕದಲ್ಲಿ ಪ್ರಯಾಣಿಸುವಂತಾಗಿದೆ, ಪ್ರತಿ ದಿಬ ಶಾಲಾ-ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.


ಚುನಾವಣೆ ಸಂದರ್ಭದಲ್ಲಿ ಮನೆಮನೆ ಬಾಗಿಲಿಗೆ ಬಂದು ಮತ ಭಿಕ್ಷೆ ಬೇಡುವ ಅಭ್ಯರ್ಥಿಗಳು ಚುನಾವಣೆ ಗೆಲುವಿನ ಬಳಿಕ ಇತ್ತ ಸುಳಿಯುವುದೇ ಇಲ್ಲ, ಚುನಾವಣಾ ಪ್ರಚಾರದ ವೇಳೆ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಭರವಸೆಯು ಮಹಾಪೂರಕವನ್ನೇ ಹರಿಸುತ್ತಾರೆ, ನಂತರದಲ್ಲಿ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರಸ್ತೆ ಉದ್ದಕ್ಕೂ ಗುಂಡಿಗಳು ನಿರ್ಮಾಣವಾಗುವುದರಿಂದ ಮಳೆ ಬಂದಾಗ ನೀರು ಶೇಖರಣೆಯಾಗಿ ಮತ್ತಷ್ಟು ಅನಾಹುತಕ್ಕೆ ಕಾರಣವಾಗುತ್ತದೆ, ಗುಂಡಿಗೆ ಇಷ್ಟೇ ಆಳವಿದೆ ಎಂಬುವುದು ತಿಳಿಯದೆ ದ್ವಿಚಕ್ರ ವಾಹನಗಳು ನೀರು ಸಂಗ್ರಹಗೋಂಡ ಗುಂಡಿಗೆ ಇಳಿದು ಅಪಘಾತಕ್ಕೀಡಾಗುವುದು ಹೆಚ್ಚುತ್ತಿದೆ. ಇದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಆಯತಪ್ಪಿ ಬಿದ್ದು ಮಲ್ಲಕ್ಕ (75) ಎಂಬುವವರು ಎರಡು ದಿನಗಳ ಹಿಂದಷ್ಟೇ ಮೃತಪಟ್ಟಿದ್ದರು.

ಡಾಂಬರು ಹಾಕಿಸಿ 20 ವರ್ಷ ಆಗಿದೆ! : ಈ ಹಿಂದೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ವೆಂಕಟಸ್ವಾಮಿ ಅವಧಿಯಲ್ಲಿ ಮೊದಲ ಬಾರಿಗೆ ಈ ರಸ್ತೆಗೆ ಡಾಂಬರಿಕರಣ ಮಾಡಲಾಗಿತ್ತು. ಈ ರಸ್ತೆಯಲ್ಲಿ ಬಸ್, ಲಾರಿಗಳಂತ ದೊಡ್ಡ ವಾಹನಗಳು ಹೆಚ್ಚು ಸಂಚರಿಸುವುದರಿಂದ ರಸ್ತೆ ಬೇಗ ಹಾಳಾಗುತ್ತದೆ, ಆದರೆ ಇದನ್ನು ದುರಸಿ ಮಾಡುವ ಜನಪ್ರತಿನಿಧಿಗಳಾಗಲಿ ರಾಜಕೀಯ ವ್ಯಕ್ತಿಗಳಾಗಲಿ ಯಾರು ಹೋಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ, ಈ ರಸ್ತೆಗೆ ಡಾಂಬರು ಹಾಕಿಸಿ 20 ವರ್ಷಗಳೇ ಕಳೆದಿದೆ, ಯಾವೊಬ್ಬ ಶಾಸಕರು ಇತ್ತ ಗಮನ ಹರಿಸಿಲ್ಲ ಎಂಬುದು ಸಾರ್ವಜನಿಕರ ವಾದ.

ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಗಾಯಗೊಂಡುವರ ಸಂಖ್ಯೆ ಹೆಚ್ಚಾಗುತ್ತದೆ, ಅಪಘಾತಗಳಲ್ಲಿ ಕೆಲವೊಂದು ಸಾವಿನ ಪ್ರಕರಣಗಳು ನಡೆದಿದೆ. ಈ ರಸ್ತೆಯಲ್ಲಿ ಸಾಗುವುದೆಂದರೆ ಪ್ರಾಣವನ್ನು ಪಣಕ್ಕಿಟ್ಟಂತೆ.ಕಾಂತರಾಜು, ತುರುವನಹಳ್ಳಿ ರೈತ ರಸ್ತೆ ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರ ನೀಡಿದ್ದೇವೆ, ಆದರೆ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಾಗುತ್ತಿವೆ. ಕೇವಲ 7 ಕಿ.ಮೀ ದಾಟಲು ಗಂಟೆ ಗಂಟೆಗಳ ಕಾಲ ತೆಗೆದುಕೊಳ್ಳುವಂತಾಗಿದೆ.ಸುರೇಶ್‌ಬಾಬು, ತೂಬಗೆರೆ ಗ್ರಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net