

ಕೊಳ್ಳೇಗಾಲ; ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ಪ್ರೇಕ್ಷಣೀಯ ಸ್ಥಳಗಳ ಸ್ವರ್ಗ, ಇವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಆದರೆ ಬರುವ ಪ್ರವಾಸಿಗರನ್ನು ಹದಗೆಟ್ಟ ರಸ್ತೆಗಳು ಹೈರಾಣ ಮಾಡುತ್ತಿವೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಷ್ಕಾಳಜಿಗೆ ಈ ರಸ್ತೆಗಳು ಹಲವು ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ವಿಶ್ವ ವಿಖ್ಯಾತ ಭರಚುಕ್ಕಿ ಜಲಪಾತಕ್ಕೆ ತೆರಳುವ ಮುಖ್ಯ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರಾಗಿದೆ. ಇನ್ನು ಗುಂಡಾಲ್ ಜಲಾಶಯ ರಸ್ತೆಯಂತೂ ಜನರು ನೆಮ್ಮದಿಯಾಗಿ ಹೋಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ದುಸ್ಥಿತಿಗೆ ತಲುಪಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಸರಾಂತ ಸ್ಥಳಗಳಲ್ಲಿ ಇವೆರಡು ಪ್ರಮುಖವಾದವು. ಅಲ್ಲದೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ರಸ್ತೆಗಳಲ್ಲಿ ಸಂಚರಿಸಿದರೂ ರಸ್ತೆ ಅಭಿವೃದ್ಧಿ ಮಾಡಿಸದೆ ಜಾಣಕುರುಡು ಪ್ರದರ್ಶನ ಮಾಡುತ್ತಿರುವುದು ಸುಳ್ಳಲ್ಲ.
ಭರಚುಕ್ಕಿ ಜಲಪಾತ, ದರ್ಗಾ, ಸಮೂಹ ದೇವಾಲಯಗಳಾದ ಆದಿಶಕ್ತಿ ಮಾರಮ್ಮ ದೇವಾಲಯ, ಶ್ರೀ ಮಧ್ಯ ರಂಗನಾಥ ಸ್ವಾಮಿ ದೇವಾಲಯ ಹಾಗೂ ಚಕ್ರ ಮೀನಾಕ್ಷಿ ಸಮೇತ ಸೋಮೇಶ್ವರ ದೇವಾಲಯಗಳಿಗೆ ವರ್ಷವಿಡೀ ದೇಶದ ವಿವಿಧ ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಆದರೆ, ಮೂಲಸೌಕರ್ಯಗಳಲ್ಲಿ ಪ್ರಮುಖವಾದ ಸುಸಜ್ಜಿತ ರಸ್ತೆಯೇ ಜನರಿಗಿಲ್ಲ. ತಗ್ಗು-ಗುಂಡಿಗಳಲ್ಲಿ ಬಿದ್ದು ಎದ್ದು ಜನರು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕಿದೆ. ವಾಹನಗಳಲ್ಲಿ ಸಂಚರಿಸುವವರಿಗೆ ನರಕಯಾತನೆಯನ್ನೂ ರಸ್ತೆ ನೀಡುತ್ತಿದೆ.
ಆಟೋ ಚಾಲಕರೇ ಡಾಂಬರು ಹಾಕಿದ್ದರು
ಶಿವನಸಮುದ್ರ ಗ್ರಾಮದ ಧಾರ್ಮಿಕ ತಾಣಗಳು ಹಾಗೂ ನೈಸರ್ಗಿಕ ತಾಣಗಳನ್ನೇ ನಂಬಿ ಆಟೋ ಚಾಲಕರು ಹಾಗೂ ಸಣ್ಣ ಪುಣ್ಣ ವ್ಯಾಪಾರಿಗಳು ಜೀವನ ನಡೆಸುತ್ತಿದ್ದಾರೆ. ಜನರನ್ನು ಆಟೋದಲ್ಲಿ ಕರೆದೊಯ್ಯುವಾಗ ರಸ್ತೆಯಲ್ಲಿರುವ ಗುಂಡಿಗಳು ನೀಡುವ ತೊಂದರೆ ಸರಿಪಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಆಟೋ ಚಾಲಕರ ಸಂಘದ ಚಾಲಕರು ಇತ್ತೀಚೆಗೆ ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಿಂದ ಭರಚುಕ್ಕಿ ಜಲಪಾತ ಪ್ರವೇಶ ದ್ವಾರದವರೆವಿಗೆ ಇರುವ ಗುಂಡಿಗಳಿಗೆ ಸತ್ತೇಗಾಲ-ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಕೈಗೊಂಡಿದ್ದ ರಸ್ತೆ ಕಾಮಗಾರಿಯ ಡಾಂಬರನ್ನು ಕೇಳಿ ಪಡೆದು ಹಾಕಿ ಮುಚ್ಚಿದರು. ಈ ಪ್ರಸಂಗ ಇಲ್ಲಿರುವ ಆಡಳಿತ ವ್ಯವಸ್ಥೆಯನ್ನೆ ಅಣಕಿಸುವಂತೆ ಮಾಡಿತು. ಆದರೂ ರಸ್ತೆ ಅಭಿವೃದ್ಧಿ ನನೆಗುದ್ದಿಗೆ ಬಿದ್ದಿದೆ.
ಯಮರೂಪಿ ಗುಂಡಿಗಳು ಎಲ್ಲೆಲ್ಲಿವೆ?
ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಿಂದ ಶಿಂಷಾ ಮಾರಮ್ಮನ ದೇವಾಲಯ ಮುಂಭಾಗದವರೆಗೆ ಅಲ್ಲಲ್ಲಿ ಗುಂಡಿಗಳಿವೆ. ಶಿಂಷಾ ಮಾರಮ್ಮ ದೇವಾಲಯದಿಂದ ಭರಚುಕ್ಕಿ ಪ್ರವೇಶ ದ್ವಾರದವರೆಗೆ ದೊಡ್ಡ ದೊಡ್ಡ ನೂರಾರು ಗುಂಡಿಗಳು ನಿರ್ಮಾಣವಾಗಿದ್ದು. ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಇನ್ನು ಗುಂಡಾಲ್ ಜಲಾಶಯಕ್ಕೆ ತೆರಳುವ ಮಧುವನಹಳ್ಳಿ ಬೈಪಾಸ್ ಕ್ರಾಸ್‌ನಿಂದ ಲೊಕ್ಕನಹಳ್ಳಿ ಮಾರ್ಗದ ರಸ್ತೆಯಿಂದ ಗುಂಡಾಲ್ ಜಲಾಶಯವರೆವಿಗೂ ಗುಂಡಿಮಯವಾಗಿದೆ. ಈ ರಸ್ತೆ ಸಂಚಾರಕ್ಕೆ ಯೋಗ್ಯವೇ ಇಲ್ಲದಂತಾಗಿದೆ.
ವಿಶ್ವದೆಲ್ಲೆಡೆ ಪ್ರವಾಸಿಗರ ಆಗಮನ
ಜಿಲ್ಲೆಗಿರುವ ಹಿಂದುಳಿದ ಅಣೆಪಟ್ಟಿ ಹೋಗದಿರಲು ಈ ರಸ್ತೆಗಳು ಕಾರಣವಾಗಿವೆ. ಭರಚುಕ್ಕಿ ಫಾಲ್ಸ್ ವೀಕ್ಷಣೆಗೆ ಮಳೆಗಾಲದಲ್ಲಿ ವಿಶ್ವದ ವಿವಿಧ ದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ದೇಶದ ವಿವಿಧ ರಾಜ್ಯದ ಜನರು ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಜನರು ಭೇಟಿ ನೀಡುತ್ತಾರೆ. ಹೆಚ್ಚಾಗಿ ಹೊರ ರಾಜ್ಯವಾದ ತಮಿಳುನಾಡು, ಆಂಧ್ರಪ್ರದೇಶ, ರಾಜ್ಯದ ಬೆಂಗಳೂರು, ಮೈಸೂರು, ಹಾಸನ, ಮಡಿಕೇರಿ, ಮಂಡ್ಯ, ಬೆಳಗಾವಿ, ತುಮಕೂರು ಹೀಗೆ ಹಲವು ಜಿಲ್ಲೆಗಳ ಜನರು ವರ್ಷವಿಡೀ ಬರಲಿದ್ದಾರೆ. ಪೂರ್ವ ಮಂಗಾರು ಬಳಿಕ ಆಗಸ್ಟ್ ತಿಂಗಳಲ್ಲಿ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಗುಂಡಾಲ್ ಜಲಾಶಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ಕೊಡುತ್ತಿದ್ದರು. ಕೆಲ ವರ್ಷಗಳಿಂದ ಈ ರಸ್ತೆಯ ದುಸ್ಥಿತಿಗೆ ಬೇಸತ್ತು ಜನರ ಆಗಮನ ಕಡಿಮೆಯಾಗಿದೆ.
ಶಾಸಕರು ಅಭಿವೃದ್ಧಿ ಪಡಿಸಲಿ: ಹನೂರು ಶಾಸಕ ಎಂ.ಆರ್.ಮಂಜುನಾಥ್ ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ಚಿಕ್ಕಲ್ಲೂರು ರಸ್ತೆಗೆ 25 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಬಂಡಳ್ಳಿ ರಸ್ತೆಗೆ 25 ಕೋಟಿ ರೂ. ಬಿಡುಗಡೆ ಮಾಡಿಸಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂತೆಯೇ, ಗುಂಡಾಲ್ ಹಾಗೂ ಭರಚುಕ್ಕಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಜನರ ಒತ್ತಾಯಿಸಿದ್ದಾರೆ.
ಚಿಕ್ಕಲ್ಲೂರು ರಸ್ತೆ ಹಾಗೂ ಬಂಡಳ್ಳಿ ರಸ್ತೆ ಅಭಿವೃದ್ಧಿಯಂತೆ ಶೀಘ್ರದಲ್ಲೇ ಶಿವನಸಮುದ್ರ ಗ್ರಾಮದ ಭರಚುಕ್ಕಿ ರಸ್ತೆಯೂ ಅಭಿವೃದ್ಧಿಯಾಗಲಿದೆ. 100 ಅಡಿ ರಸ್ತೆ ಮಾಡುವ ಯೋಜನೆ ಇದಾಗಿದೆ. ಅಂತೆಯೇ, ಗುಂಡಾಲ್ ಜಲಾಶಯ ರಸ್ತೆಗೂ ಕ್ರಮವಹಿಸಲಾಗುವುದು. ಎಂ.ಆರ್.ಮಂಜುನಾಥ್ ಹನೂರು ಶಾಸಕ ಭರಚುಕ್ಕಿ ಫಾಲ್ಸ್ ಹಾಗೂ ಗುಂಡಾಲ್ ರಸ್ತೆಯಲ್ಲಿ ಜನರು ನರಕಯಾತೆನೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳ ಸಮಸ್ಯೆ ಇದಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಜಿಲ್ಲೆಯ ಅಭಿವೃದ್ಧಿಗೆ ಮಾರಕವಾದಂತಿದೆ. ಮಧು ಆಟೋ ಚಾಲಕ, ಡಾ.ಬಿ.ಆರ್.ಅಂಬೇಡ್ಕರ್ ಆಟೋ ಚಾಲಕರ ಹಾಗೂ ಮಾಲೀಕ ಸಂಘ, ಸತ್ತೇಗಾಲ ಹ್ಯಾಂಡ್‌ಪೋಸ್ಟ್