

ವಿಜಯಪುರ: ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡನ ಹತ್ಯೆಗೆ ಯತ್ನ ನಡೆಸಿದ್ದ ಘಟನೆಗೆ ಸಂಭಂದಿಸಿದಂತೆ ಇಂದು ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಬಂಧಿತರನ್ನು ಸಾರವಾಡದ ಕಾಶಿನಾಥ ತಾಳಿಕೋಟೆ, ಯುನಿಷ್ ಅಲಿ ಮುಜಾವರ, ರಾಜು ಗುನ್ನಾಪುರ ಹಾಗೂ ಸಿದ್ದು ಮೂಡಂಗಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯ ಕ್ಕೆ ಬಳಸಿದ್ದ ಒಂದು ಮಚ್ಚು, ಎರಡು ಮೊಬೈಲ್ ಹಾಗೂ ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನವ್ಹೆಂಬರ್ 2ರಂದು ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಬಳಿ ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದರು. ಘಟನೆ ನಡೆದು 6 ದಿನದಲ್ಲಿ ಇಲ್ಲಿಯವರೆಗೆ 11ಜನರನ್ನು ಬಂಧಿಸಲಾಗಿದೆ. ಘಟನೆಯ ಮಾಸ್ಟರ್ ಮೈಂಡ್ ಮಡಿವಾಳಯ್ಯ ಹಿರೇಮಠ ಊರ್ಫ್ ಸ್ವಾಮಿ ಎಂಬಾತ ಇನ್ನು ತಲೆ ಮರೆಸಿಕೊಂಡಿದ್ದಾನೆ. ಗುಂಡಿನ ದಾಳಿಯಲ್ಲಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮಹಾದೇವ ಸಾಹುಕಾರ ಭೈರಗೊಂಡ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಾಹುಕಾರನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ರೂ ಸಹ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ನಗರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಎಸ್ ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.