ಗುಂಡಿ ಸುತ್ತ ದೀಪಗಳನ್ನು ಹಚ್ಚಿ ವಿನೂತನ ಪ್ರತಿಭಟನೆ

14
Published on

ಮೈಸೂರು: ನಗರದ ರಸ್ತೆಗಳು ಗುಂಡಿ ಬಿದ್ದಿರುವುದನ್ನು ಖಂಡಿಸಿ ಕೃಷ್ಣರಾಜ ಯುವ ಬಳಗದಿಂದ ಗುಂಡಿಯ ಸುತ್ತ ದೀಪ ಹಚ್ಚಿ ದೀಪಾವಳಿ ಆಚರಿಸುವ ಮೂಲಕ ವಿನೂತನವಾಗಿ ಮಂಗಳವಾರ ಪ್ರತಿಭಟನೆ ನಡೆಸಿತು.
ನಗರಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲು ಸೋಮವಾರ ರಾತ್ರಿ ನಗರದ ಮಧ್ವಾಚಾರ್ಯ ರಸ್ತೆ ಬಳಿಯಿರುವ ಗಾಡಿಚೌಕದ ಬಳಿ ಗುಂಡಿಗಳ ಸುತ್ತ ದೀಪ ಹಚ್ಚಿ ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಲಾಯಿತು.
ಕಾಂಗ್ರೆಸ್ ಮುಖಂಡ ಎಂ.ಪ್ರದೀಪ್‌ಕುಮಾರ್ ಮಾತನಾಡಿ, ದಸರೆಯೊಳಗೆ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಭರವಸೆ ನೀಡಿದರು. ಆದರೆ ದಸರಾ ಮುಗಿದರೂ ರಸ್ತೆ ದುರಸ್ತಿಗೊಳಿಸುತ್ತಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಪ್ರಮುಖ ರಸ್ತೆಗಳು ಸೇರಿದಂತೆ ಅನೇಕ ರಸ್ತೆಗಳು ಹಾಳಾಗಿ ಹೆಚ್ಚು ಅಪಘಾತ, ಅನಾಹುತಗಳು ಅಗುತ್ತಿವೆ. ರಸ್ತೆಗಳ ತುಂಬಾ ಗುಂಡಿಗಳೇ ಇದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ವರದಿ ಪ್ರಕಾರ ಬೆಂಗಳೂರಿನಲ್ಲಿ ಗುಂಡಿ ತಪ್ಪಿಸಲು ಹೋಗಿ 28 ಜನ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರಿನಲ್ಲೂ ಇಂತಹ ಅನಾಹುತ ಅಗುವ ಮುನ್ನಾ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಗುಂಡಿ ಬಿದ್ದ ರಸ್ತೆಗಳಿಂದ ಅಪಘಾತವಾಗುವ ಘಟನೆಗಳು ಮರುಕಳಿಸಬಾರದು. ಮರು ಕಲ್ಪಿಸಿದರೆ ಇದಕ್ಕೆ ಪೂರ್ಣ ನಗರಪಾಲಿಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ತಕ್ಷಣವೇ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು, ಕೂಡಲೇ ನಗರದಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿದರು.
ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಹಿಂದ ನಟರಾಜ್, ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ, ಪದಾಧಿಕಾರಿಗಳಾದ ಎಸ್.ಎನ್.ರಾಜೇಶ್, ತೀರ್ಥಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net