

ಸಿದ್ದಾಪುರ: ಕಳೆದ 15 ವರ್ಷಗಳಿಂದ ಅಭಿವೃದ್ಧಿ ಕಾಣದೆ ಗುಂಡಿಮಯವಾಗಿದ್ದ ರಸ್ತೆಯನ್ನು ಟಾಟಾ ಸಂಸ್ಥೆಯ ಸಿಬ್ಬಂದಿ ರಿಪೇರಿ ಮಾಡಿ ಗಮನ ಸೆಳೆದಿದ್ದಾರೆ.
ಸರ್ಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಬೇಕಾಗಿದ್ದ ಕಾರ್ಯವನ್ನು ಟಾಟಾ ಸಂಸ್ಥೆಯ ಕಾರ್ಮಿಕರು ಬುಧವಾರ ಮಾಡಿದರು.
ನೆಲ್ಯಹುದಿಕೇರಿ -ಅತ್ತಿಮಂಗಲ- ಮಾರ್ಗವಾಗಿ ಹೊಸ್ಕೇರಿ, ಅರೇಕಾಡು ಹಾಗೂ ಮರಗೋಡು ಮಾರ್ಗದ ಮುಖ್ಯ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಬೇಕು ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಹಲವು ಬಾರಿ ಎಚ್ಚರಿಸಿದ್ದರೂ ಕ್ರಮ ವಹಿಸಿರಲಿಲ್ಲ. ಟಾಟಾ ಸಂಸ್ಥೆ ಕಾರ್ಮಿಕರು ಈ ಕಾರ್ಯ ಮಾಡಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭ ಮಾತನಾಡಿದ ಸ್ಥಳೀಯರಾದ ಚೇರಂಡ ಸುನಿಲ್, ಜಿಲ್ಲಾಡಳಿತ ಇನ್ನು ಮುಂದಾದರೂ ಎಚ್ಚೆತ್ತು ಈ ಮಾರ್ಗವನ್ನು ಸಮಗ್ರ ಅಭಿವೃದ್ಧಿಪಡಿಸಬೇಖು. ಇಲ್ಲದಿದ್ದರೆ ಸಂಚಾರ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಿನನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಹಲವು ವರ್ಷಗಳಿಂದಲೂ ಇದೇ ಸಮಸ್ಯೆ ಇರುವ ಕಾರಣ ವಾಹನ ಅಪಘಾತಗಳೂ ಹೆಚ್ಚಾಗಿವೆ. ಸೂಕ್ತವಾದ ನಿರ್ವಹಣೆ ಇಲ್ಲದ ಕಾರಣ ಬಾಡಿಗೆ ವಾಹನಗಳು ಬರಲು ಒಪ್ಪುತ್ತಿಲ್ಲ ಎಂದರು. ಶಾಸಕರೂ ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದರು.
ಬೆಳೆಗಾರ ಕೆ.ಯು ತಿಮ್ಮಯ್ಯ, ಟಾಟಾ ಸಂಸ್ಥೆಯ ಸಿಬ್ಬಂದಿ ಗಣೇಶ್, ನೆಲ್ಸನ್, ಮಲ್ಲೇಶ್ ಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.