

ಹನೂರು: ಪಟ್ಟಣದಿಂದ ಬಂಡಳ್ಳಿ ಗ್ರಾಮದವರೆಗೆ ಕಳೆದ 2 ವರ್ಷಗಳಿಂದ ತೀವ್ರ ಹದಗೆಟ್ಟು ಗುಂಡಿಗಳು ನಿರ್ಮಾಣವಾಗಿದ್ದ ರಸ್ತೆಗೆ ಲೋಕೋಪಯೋಗಿ ಇಲಾಖೆ ಗುರುವಾರದಿಂದ ತೇಪೆ ಹಾಕುವ ಕಾರ್ಯ ಆರಂಭಿಸಿದೆ.
ಪಟ್ಟಣದಿಂದ ಬಂಡಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಚಂಗವಾಡಿ, ಗಣೇಶಪುರ, ಮಣಗಳ್ಳಿ, ಅಲಗಾಪುರ, ಶಾಗ್ಯ, ತೊಮಿಯಾರ್ ಪಾಳ್ಯ ಹಾಗೂ ಈ ಭಾಗದ ಇನ್ನಿತರ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಗೆ 7 ವರ್ಷದ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಕಳೆದ 2 ವರ್ಷದಿಂದ ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದವು. ಇದರಿಂದ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ಈ ದಿಸೆಯಲ್ಲಿ ಪಿಡಬ್ಲುೃಡಿ ಕಳೆದ ವರ್ಷಗುಂಡಿಗಳಿಗೆ ತೇಪೆ ಹಾಕಿತ್ತು. ಆದರೆ, ಆಗಾಗ್ಗೆ ಸುರಿದ ಮಳೆಯಿಂದಾಗಿ ಕಳೆದ ವರ್ಷ ಬಹುತೇಕ ಕಡೆಗಳಲ್ಲಿ ಸಂಚರಿಸಲಾಗದಷ್ಟು ಗುಂಡಿಗಳು ನಿರ್ಮಾಣವಾಗಿದ್ದವು. ಇದರಿಂದ ಬೈಕ್ ಸವಾರರು ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಂಡ ನಿದರ್ಶನಗಳಿದ್ದವು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಪ್ರತಿಭಟನೆಯನ್ನೂ ಸಹ ನಡೆಸಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಿಡಬ್ಲುೃಡಿ ಸದ್ಯ 7 ಲಕ್ಷ ರೂ. ವೆಚ್ಚದಲ್ಲಿ ಸದ್ಯ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿದೆ.