ಗುಂಡಾಲ್ ಜಲಾಶಯದಲ್ಲಿ ಪ್ರವಾಸಿಗರ ಹುಚ್ಚು ಸಾಹಸ

1kgl photo1
ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದ ಬಳಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿರುವುದು.
Published on

ಡ್ಯಾಂಗೆ ಅಕ್ರಮವಾಗಿ ಪ್ರವೇಶ, ಮೋಜು ಮಸ್ತಿಯಿಂದ ಎದುರಾಗಲಿದೆ ಜೀವಕ್ಕೆ ಕಂಟಕ\

ಕೊಳ್ಳೇಗಾಲ: ಸತತ ಮಳೆಯಿಂದ ಭರ್ತಿಯಾಗಿ ಕೋಡಿಬಿದ್ದ ಗುಂಡಾಲ್ ಜಲಾಶಯದಲ್ಲಿ ಪ್ರವಾಸಿಗರ ಮೋಜು-ಮಸ್ತಿ ಹೆಚ್ಚಾಗಿದ್ದು, ಯುವಕರು ಅಪಾಯವನ್ನೂ ಲೆಕ್ಕಿಸದೆ ನಿತ್ಯ ಈಜುವ ಹುಚ್ಚು ಸಾಹಸ ಮಾಡುತ್ತಿದ್ದಾರೆ.


ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಬಿದ್ದಿರುವುದರಿಂದ ಪ್ರಮುಖ ಕೆರೆ ಕಟ್ಟೆಗಳು, ಡ್ಯಾಂಗಳು ಭರ್ತಿಯಾಗಿವೆ. ಅಂತೆಯೇ, ಬಿಳಿಗಿರಿರಂಗನ ಬೆಟ್ಟ(ಹುಲಿ ಸಂರಕ್ಷಿತ ಪ್ರದೇಶ)ದಲ್ಲಿ ಹೆಚ್ಚು ಮಳೆಯಾಗಿ ಅದಕ್ಕೆ ಹೊಂದಿಕೊಂಡಂತಿರುವ ಗುಂಡಾಲ್ ಜಲಾಶಯ ಕೋಡಿ ಬಿದ್ದು ಹರಿಯುತ್ತಿದೆ. 43 ವಷರ್ಗಳ ಬಳಿಕ ಗುಂಡಾಲ್ 2021ರ ಡಿಸೆಂಬರ್ ತಿಂಗಳಲ್ಲಿ ಇದೇ ರೀತಿ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿತ್ತು. ಅದರಂತೆ ಒಂದು ವರ್ಷ ತುಂಬುವ ಮುನ್ನವೆ ಮತ್ತೆ ತುಂಬಿ ಹರಿಯುತ್ತಿದೆ.


ದಟ್ಟವಾದ ಕಾನನದ ನಡುವೆ ಮೈದುಂಬಿ ಹರಿಯುತ್ತಿರುವ ಜಲಾಶಯ ನೋಡಲು ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಪ್ರವಾಸಿಗರು ವೀಕ್ಷಿಸಲು ಮುಗಿಬೀಳುತ್ತಿದ್ದಾರೆ. ಅಣ್ಣೆಕಟ್ಟಿನ ಮೇಲೆ ನಡೆಯುವುದಲ್ಲದೇ, ಈಜುವ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಜಲಾಶಯಕ್ಕೆ ಎರಡು ಕಡೆಯಿಂದ ಪ್ರವೇಶಿಸಲು ಅವಕಾಶವಿದ್ದು, ಗುಂಡಾಲ್ ಜಲಾಶಯ ಮುಖ್ಯದ್ವಾರ ಹಾಗೂ ಗುಂಡಾಲ್ ಅತಿಥಿಗೃಹಕ್ಕೆ ತೆರಳುವ ಇವೆರಡೂ ಮಾರ್ಗವನ್ನು ಇಲಾಖೆ ಬಂದ್ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ.


ಗುಂಡಾಲ್ ಅಣೆಕಟ್ಟೆ ವಿಶಾಲವಾಗಿರುವುದರಿಂದ ಅಲ್ಲಲ್ಲಿ ನುಸುಳಿ ನಡೆದುಕೊಂಡು ನೀರು ತುಂಬಿ ಕೋಡಿ ಬಿದ್ದ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿ ಯುವಕರು ಹಾಗೂ ಮಕ್ಕಳು ಜೀವಭಯ ತೊರೆದು ಈಜುವ ಸಾಹಸ ಮಾಡುತ್ತಿದ್ದಾರೆ. ಇವರ ಹುಚ್ಚು ಸಾಹಸಕ್ಕೆ ಕಬಿನಿ ಜಲಾಶಯದ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಜಲಾಶಯ ಸೌಂದರ್ಯ ಸವಿಯಲು ಬರುವವರಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಇದೇ ನೆಪ ಮಾಡಿಕೊಂಡು ಜಲಕ್ರೀಡೆ, ಎತ್ತರದಿಂದ ಹಾರುವುದು ಇನ್ನಿತರ ಹುಚ್ಚು ಸಾಹಸ ಮಾಡುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ.


ಕೋಡಿಬಿದ್ದ ಸ್ಥಳದಲ್ಲಿ ಹೂಳು ತುಂಬಿಕೊಂಡಿದ್ದು ಈಜುವವರು ಸ್ವಲ್ಪ ಮೈಮರೆತು ಕಾಲು ಬಿಟ್ಟರೆ ಕೆಸರು, ಗಿಡಗಂಟಿ ನಡುವೆ ಸಿಲುಕಿ ಮೇಲಕ್ಕೆ ಬಾರದಿರುವ ಸಂಭವವೇ ಹೆಚ್ಚಿದೆ. ಇಂತಹ ಅಪಾಯ ಕಣ್ಣೆದುರಿದ್ದರೂ ಪ್ರವಾಸಿಗರು ಹುಚ್ಚಾಟ ಮರೆಯುತ್ತಿರುವುದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.ಆಪತ್ತು ಸಂಭವಿಸುವ ಮುನ್ನ ಪ್ರವಾಸಿಗರ ದುಸ್ಸಾಹಸಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಿ ಸೂಕ್ತ ಕ್ರಮವಹಿಸಬೇಕಿದೆ. ಇಲ್ಲವೇ, ಪ್ರವಾಸಿಗರ ಹುಚ್ಚಾಟಕ್ಕೆ ಕಡಿವಾಣ ಹಾಕಲು ಪೊಲೀಸರ ನಿಯೋಜನೆ ಮಾಡಿದರೆ ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಕೋಡಿಬಿದ್ದ ಜಲಾಶಯದಲ್ಲಿ ಪ್ರವಾಸಿಗರು ಈಜುವುದು ಗಮನದಲ್ಲಿದೆ. ಇದರ ಕಡಿವಾಣಕ್ಕೆ ಈಗಾಗಲೇ ಯೋಚಿಸಿದ್ದೇವೆ. ಪೊಲೀಸ್ ಇಲಾಖೆಗೆ ದೂರು ನೀಡಿ ಪ್ರವಾಸಿಗರ ದುಸ್ಸಾಹಸ ಪ್ರದರ್ಶನಕ್ಕೆ ತೆರೆ ಎಳೆಯಲಾಗುವುದು.
ರಾಮಕೃಷ್ಣ ಎಇಇ, ಕಾವೇರಿ ನೀರಾವರಿ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net