ಗುಂಡಮಗೆರೆ ಕೆರೆಗೆ ಬಾಗಿನ ಅರ್ಪಣೆ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಶಾಸಕ ಟಿ.ವೆಂಕಟರಮಣಯ್ಯ ವಿಶೇಷ ಪೂಜೆ

11dbp2
Published on

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಎಂದೂ ಬತ್ತದ ಕೆರೆಯೆಂದ ಪ್ರಖ್ಯಾತಿ ಪಡೆದಿರುವ ಗುಂಡಮಗೆರೆ ಕೆರೆ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಶಾಸಕ ಟಿ.ವೆಂಕಟರಮಣಯ್ಯ ಸೋಮವಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಈ ವರ್ಷ ತಾಲೂಕಿನಲ್ಲಿ ಹೆಚ್ಚಿನ ಕೆರೆಗಳು ತುಂಬಿ ಕೋಡಿ ಬಿದ್ದಿರುವುದು ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ಹಿಂದೆ ಗುಂಡಮಗೆರೆ ಕೆರೆಯಿಂದ ಹೊಸಹಳ್ಳಿ ಹಾಗೂ ನಿಂಗನಾಯಕನ ಕೆರೆಗೆ ನೀರು ಹರಿಯಲು ರಾಜ ಕಾಲುವೆ ಪುನಶ್ಚೇತನ ಕಾಮಗಾರಿಯಿಂದ ಈ ಸಾಕಷ್ಟು ಕೆರೆಯಲ್ಲಿ ನೀರು ಸಂಗ್ರಹವಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.

ಗುಂಡಮಗೆರೆ ಕೆರೆಯಿಂದ ಮಾಕಳಿ ಬೆಟ್ಟಕ್ಕೆ ತೆರಳಲು ಸೇತುವೆ ನಿರ್ಮಾಣದ ಅಗತ್ಯವಿದೆ. ಕೋಡಿ ಹರಿದು ವ್ಯರ್ಥವಾಗಿ ಹರಿಯುವ ನೀರನ್ನು ಚೆಕ್‌ಡ್ಯಾಂ ನಿರ್ಮಿಸಿ ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಮುಂದಾಗಬೇಕು. ಹೊಸಹಳ್ಳಿ ಕೆರೆಗೆ ನೀರು ಸಮರ್ಪಕವಾಗಿ ಹರಿಯಲು ಚಾನಲ್ ನಿರ್ಮಾಣ ಹಾಗೂ ಕೊಟ್ಟಿಗೆಮಾಚೇನಹಳ್ಳಿ ಸೇತುವೆ ನಿರ್ಮಾಣಕ್ಕೆ ಜಿಲ್ಲಾಡಳಿತ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ತಾಲೂಕಿನ ನೀರಾವರಿ ಯೋಜನೆಗಳಿಗೆ ತಡೆಯೊಡ್ಡಲಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ತ್ಯಾಜ್ಯ ಸಂಸ್ಕರಣೆ ನೀರನ್ನು ಹರಿಸಲು 120 ಕೆರೆಗಳನ್ನು ಸೇರ್ಪಡೆ ಮಾಡಲಾಗಿತ್ತು. ಆದರೆ ಈ ಸರ್ಕಾರ ಮತ್ತೆ ಮೂರು ಹಂತ ಕಾಮಗಾರಿಗೆ ಮುಂದಾಗಿ ದೊಡ್ಡಬಳ್ಳಾಪುರ ತಾಲೂಕನ್ನು ಕಡೆಗಣಿಸಿದ್ದು ತಾಲೂಕಿನ ಜನತೆ ಪಕ್ಷಾತೀತವಾಗಿ ಹೋರಾಟಕ್ಕೆ ಸಿದ್ಧವಾಗಬೇಕಿದೆ ಎಂದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ರೈತರ ಸಮಸ್ಯೆ ಪರಿಗಣಿಸಿ ಸೇತುವೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಣ್ಣ, ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ವೆಂಕಟಾಚಲಯ್ಯ, ತಾಪಂ ಮಾಜಿ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ವಿಮಲಾಜಯರಾಂ, ಹೊಸಹಳ್ಳಿ ಠಾಣೆ ಎಎಸ್‌ಐ ವರಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಪಿಡಿಒ ನಾಗರಾಜ್, ಮುಖಂಡರಾದ ಅಣ್ಣಯ್ಯಪ್ಪ, ಓಜೇನಹಳ್ಳಿ ಕಿಟ್ಟಿ, ಜಯರಾಂ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net