

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಎಸ್.ಆರ್. ಗುಂಜಾಳ ಮಾನವೀಯ ಮೌಲ್ಯಗಳ ಆಗರ. 12ನೇ ಶತಮಾನದ ಶರಣರ ಸಾಕ್ಷಾತ್ ಪ್ರತಿರೂಪ ಎಂದು ಸಾಹಿತಿ ಡಾ. ವೀರಣ್ಣ ರಾಜೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಎಸ್.ಆರ್. ಗುಂಜಾಳ ದತ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಈರಪ್ಪ ಜಾಲಿಕಟ್ಟಿ ಸಂಪಾದಿತ 91ರ ಗ್ರಂಥ ನೆನಪಿನ ಭಂಡಾರ ಮತ್ತು ಪ್ರಕಾಶ ಗಿರಿಮಲ್ಲನವರ ಸಂಪಾದಿತ ಬಹುಮುಖ ವ್ಯಕ್ತಿತ್ವದ ಶಾಂತಾದೇವಿ ಗುಂಜಾಳ ಕೃತಿ ಬಿಡುಗಡೆ ಸಮಾರಂಭಲ್ಲಿ ಅವರು ಮಾತನಾಡಿದರು.
ಗುಂಜಾಳರ ಆಸಕ್ತಿಯ ಕ್ಷೇತ್ರ ಗ್ರಂಥಾಲಯ ವಿಜ್ಞಾನ. ಈ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದರು. ಈ ಕ್ಷೇತ್ರಕ್ಕೆ ಸಂಬಂಧಿಸಿ ನೂರಾರು ಕೃತಿಗಳನ್ನು ರಚಿಸಿ ರಾಷ್ಟ್ರದ ಶ್ರೇಷ್ಠ ಗ್ರಂಥಾಲಯ ವಿಜ್ಞಾನಿಗಳೆಂಬ ಖ್ಯಾತಿ ಗಳಿಸಿದರು. ಅವರ ಬತ್ತದ ಉತ್ಸಾಹ, ಆದರ್ಶ ಬದುಕು ಇತರರಿಗೆ ಮಾದರಿ ಎಂದರು.
ಡಾ. ಶಂಭು ಹೆಗಡಾಳ ಮಾತನಾಡಿ, ಓದು ಮತ್ತು ಬರಹ ಡಾ. ಗುಂಜಾಳ ಅವರ ಬದುಕಿನ ಉಸಿರಾಗಿದೆ. ಇವುಗಳಿಂದ ಬದುಕಿನ ಚಲನಶೀಲತೆ ಹೆಚ್ಚಿಸಿಕೊಂಡು ಜ್ಞಾನ ಸಂಪತ್ತನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಕೃತಿ ಸಂಪಾದಕರಾದ ಈರಪ್ಪ ಜಾಲಿಕಟ್ಟಿ ಹಾಗೂ ಪ್ರಕಾಶ ಗಿರಿಮಲ್ಲನವರ ಅನಿಸಿಕೆ ಹಂಚಿಕೊಂಡರು. ಡಾ. ಎಸ್.ಆರ್. ಗುಂಜಾಳ ತಮ್ಮ ಅನುಭವ ಮೆಲುಕು ಹಾಕಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಜಿ.ಬಿ. ಹೊಂಬಳ, ಸುರೇಶ ಹೊರಕೇರಿ, ಮಹಾಂತೇಶ ನರೇಗಲ್, ರಾಮಚಂದ್ರ ದೋಂಗಡೆ, ಡಾ. ರಾಜಶೇಖರ ಬಶೆಟ್ಟಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.