

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ನಾಗದೇನಹಳ್ಳಿ ಬಳಿಯ ಗೀತಂ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ವಿದ್ಯಾರ್ಥಿನಿ ಸಾವಿನ ಪ್ರಕರಣದ ನಂತರ ಕಾಲೇಜು ಕ್ಯಾಂಪಸ್‌ನಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. ಪರಿಸ್ಥಿತಿ ತಿಳಿಗೊಳಿಸಲು ಕಾಲೇಜು ಆಡಳಿತ ಮಂಡಳಿ 1 ವಾರ ರಜೆ ೋಷಿಸಿದೆ.
ರಜೆ ೋಷಿಸುತ್ತಿದ್ದಂತೆ ಬಹುತೇಕ ವಿದ್ಯಾರ್ಥಿಗಳು ಗುರುವಾರ ಸಂಜೆಯೇ ತಂತಮ್ಮ ಊರುಗಳತ್ತ ಹೆಜ್ಜೆಹಾಕಿದರು. ವಿದೇಶದ ಭಾಗಶಃ ವಿದ್ಯಾರ್ಥಿಗಳು ಶುಕ್ರವಾರ ವಿಮಾನ ನಿಲ್ದಾಣದತ್ತ ತೆರಳಿದರು. ಕಾಲೇಜಿನಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ದೊಡ್ಡಬಳ್ಳಾಪುರ ಠಾಣೆ ಇನ್‌ಸ್ಪೆಕ್ಟರ್ ಸತೀಶ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಪಾಲಕರ ನಡುವೆ ಸಂಧಾನ ಸಭೆ ನಡೆಸಲಾಗಿದೆ.
ಇಂದು ಮೃತದೇಹ ರವಾನೆ: ಹಾಸ್ಟೆಲ್‌ನ 6ನೇ ಮಹಡಿಯಿಂದ ಆಯತಪ್ಪಿ ಬಿದ್ದು ಮೃತಪಟ್ಟ ಉಗಾಂಡ ಮೂಲದ ವಿದ್ಯಾರ್ಥಿನಿ ಹಸೀನಾ ಮೃತದೇಹವನ್ನು ಪಾಲಕರಿಗೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ. ಅಲ್ಲಿನ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಕೆಲವೊಂದು ಕಾನೂನು ಪ್ರಕ್ರಿಯೆ ಬಾಕಿ ಉಳಿದಿದೆ. ಶನಿವಾರ ಸಂಜೆಯೊಳಗೆ ಮೃತದೇಹ ರವಾನಿಸುವ ಸಾಧ್ಯತೆ ಇದೆ ಎಂದು ಇನ್‌ಸ್ಪೆಕ್ಟರ್ ಸತೀಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಪಾಲಕರ ತೀವ್ರ ಆಕ್ರೋಶ: ಕೆಲ ದಿನಗಳಿಂದ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆ ವಿದ್ಯಾರ್ಥಿಗಳ ಪಾಲಕರಲ್ಲಿ ತಲ್ಲಣ ಮೂಡಿಸಿದೆ. ಈ ಹಿಂದಿನಿಂದಲೂ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ, ರ‌್ಯಾಗಿಂಗ್‌ನಂಥ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಲೇ ಇವೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿನ್ನೆಲೆಯಲ್ಲಿ ತುಟಿಬಿಚ್ಚದೆ ಮೌನವಾಗಿದ್ದ ಪಾಲಕರು, ಈ ಘಟನೆಗಳ ಬಳಿಕ ಬಹಿರಂಗವಾಗಿ ವಿವಿ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಗುಮಾನಿ ಮೂಡಿಸಿದ ವಿದ್ಯಾರ್ಥಿನಿ ಸಾವು: ವಾರದ ಹಿಂದೆ ಐಪಿಎಲ್ ಪಂದ್ಯಾವಳಿ ವಿಚಾರಕ್ಕೆ ವಿದ್ಯಾರ್ಥಿಗಳ ಎರಡು ಗುಂಪಿನ ನಡೆದ ಮಾರಾಮಾರಿಯಿಂದಾಗಿ ಗೀತಂ ವಿವಿ ಸುದ್ದಿಯಾಗಿತ್ತು. ತೆಲುಗು ಭಾಷಿಕರು ಕನ್ನಡದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಆಚರಿಸಲಿಕ್ಕೂ ಅವಕಾಶ ನೀಡುತ್ತಿಲ್ಲ, ಮಾರಕಾಸಗಳನ್ನು ಪ್ರಯೋಗಿಸಿ ಹಲ್ಲೆ ನಡೆಸುತ್ತಾರೆ ಎಂದು ಕೆಲ ವಿದ್ಯಾರ್ಥಿಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಸ್ಥಳೀಯ ವಿದ್ಯಾರ್ಥಿಗಳ ಪಾಲಕರು ಈ ಸಂಬಂಧ ಠಾಣೆ ಮೆಟ್ಟಿಲೇರಿದ್ದರು.
ಕಾಲೇಜು ಆಡಳಿತ ಮಂಡಳಿ ಹಾಗೂ ಪಾಲಕರ ನಡುವೆ ಸಂಧಾನ ಸಭೆ ನಡೆಸಿದ್ದ ಪೊಲೀಸರು ಕಾಲೇಜು ಆಡಳಿತ ಮಂಡಳಿ ಹಾಗೂ ಹಲ್ಲೆ ನಡೆಸಿದ ಆರೋಪ ಹೊತ್ತ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದರು. ಇದಾದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಪೊಲೀಸ್ ತನಿಖೆಯಲ್ಲಿ ಮೇಲ್ನೋಟಕ್ಕೆ ಇದು ಆಯತಪ್ಪಿ ಬಿದ್ದು ಮೃತಪಟ್ಟ ಪ್ರಕರಣ ಎನ್ನಲಾಗಿದ್ದರೂ, ಇದರ ಹಿಂದೆ ರ‌್ಯಾಗಿಂಗ್ ಅಥವಾ ಇನ್ಯಾವುದೋ ಕಾರಣವಿರಬಹುದು ಎಂಬ ಗುಮಾನಿ ಪಾಲಕರ ತಲೆ ಕೊರೆಯುತ್ತಿದೆ.
ಉಗಾಂಡ ರಾಯಭಾರ ಕಚೇರಿ ಅಧಿಕಾರಿಗಳ ಸಮ್ಮುಖದಲ್ಲಿ ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಲ್ಲಿನ ಪ್ರಾಥಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ, ಶನಿವಾರ ಉಗಾಂಡಕ್ಕೆ ರವಾನಿಸುವ ಸಾಧ್ಯತೆ ಇದೆ. ನಾಗರಾಜ್, ದೊಡ್ಡಬಳ್ಳಾಪುರ ಡಿವೈಎಸ್‌ಪಿ ಕ್ಯಾಂಪಸ್‌ನಲ್ಲಿ ಕನ್ನಡ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಸಹಕಾರದೊಂದಿಗೆ ಕಾಲೇಜು ಆಡಳಿತ ಮಂಡಳಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಇಂಥ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ನೀಡಲಾಗಿದೆ. ಮುಂದೆ ಯಾವುದೇ ಕನ್ನಡ ಕಾರ್ಯಕ್ರಮಗಳಿದ್ದರೂ ಕ್ಯಾಂಪಸ್‌ನಲ್ಲಿ ಆಚರಿಸುವ ಸಂಬಂಧ ಮಾತುಕತೆ ನಡೆಸಲಾಗಿದೆ. ರಾಜಘಟ್ಟ ರವಿ, ಕರವೇ ಪ್ರಧಾನ ಕಾರ್ಯದರ್ಶಿ