ಗೀತಂ ವಿದ್ಯಾರ್ಥಿಗಳ ನಡುವೆ ಸಂಘರ್ಷ, ಭಾಷೆ ವಿಚಾರವಾಗಿ ಗಲಾಟೆ, ಪೊಲೀಸ್ ಠಾಣೆಯಲ್ಲಿ ಸಂಧಾನ

11
Published on

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ನಾಗದೇನಹಳ್ಳಿ ಬಳಿಯ ಗೀತಂ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಕಲಹ ವಿಕೋಪಕ್ಕೆ ತಿರುಗುತ್ತಿದೆ. ಭಾಷೆ ವಿಚಾರವಾಗಿ ಎರಡು ಬಣಗಳಾಗಿರುವ ವಿದ್ಯಾರ್ಥಿಗಳ ಗುಂಪು ಪರಸ್ಪರ ಹೊಡೆದಾಡುವ ಮಟ್ಟಕ್ಕೆ ಹೋಗಿದ್ದು, ಪಾಲಕರು ಆತಂಕಗೊಂಡಿದ್ದಾರೆ.

ಮೂರು ದಿನದ ಹಿಂದೆ ಆಂಧ್ರ ಮೂಲದ ಹಲವು ವಿದ್ಯಾರ್ಥಿಗಳು ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಪಾಲಕರು ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ಕನ್ನಡಪರ ಸಂಘಟನೆಗಳನ್ನು ಕೆರಳಿಸಿದ್ದು, ಭಾಷೆ ವಿಚಾರವಾಗಿ ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಸಂಘಟನೆ ಮುಖಂಡರು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ, ಪ್ರಸ್ತುತ ಸನ್ನಿವೇಶ ಬೂದಿ ಮುಚ್ಚಿದ ಕೆಂಡದಂತಿದೆ.

ಕನ್ನಡ ಧ್ವಜ ಹಾರಿಸಲೂ ಬಿಡಲ್ಲ: ವಿವಿಯಲ್ಲಿ ಆಂಧ್ರ ಹಾಗೂ ರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಕ್ಯಾಂಪಸ್‌ನಲ್ಲಿ ಭಾಷೆ ವಿಚಾರವಾಗಿ ವೈಷಮ್ಯ ಏರ್ಪಟ್ಟಿದ್ದು ಪ್ರತಿದಿನ ಒಂದಿಲ್ಲೊಂದು ಗಲಾಟೆಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ತೆಲುಗು ಭಾಷಿಗರು ಕನ್ನಡಿಗ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ, ಇಲ್ಲಿನ ವಾತಾವರಣ ಸಂಪೂರ್ಣ ತೆಲುಗುಮಯವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಿಸಲೂ ಇಲ್ಲಿ ಅನುಮತಿ ನಿರಾಕರಿಸಲಾಗಿದೆ ಎಂದು ಕನ್ನಡಿಗ ವಿದ್ಯಾರ್ಥಿಗಳು ದೂರಿದ್ದಾರೆ.

ಮಾರಕಾಸ ಬಳಕೆ: ಕಾಲೇಜು ಕ್ಯಾಂಪಸ್‌ನಲ್ಲಿ ಕೆಲವು ತೆಲುಗು ಮೂಲದ ವಿದ್ಯಾರ್ಥಿಗಳು ಮಾರಕಾಸ ಬಳಸುತ್ತಿದ್ದಾರೆ, ಇತ್ತೀಚೆಗೆ ನಡೆದ ಗಲಾಟೆಯಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಮಾರಕಾಸ ಪ್ರಯೋಗಿಸಿದ್ದಾರೆ. ಗಲಾಟೆಯಲ್ಲಿ ಕೆಲವೊಂದು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿಶ್ವವಿದ್ಯಾಲಯ ಆಂಧ್ರದ ಒಡೆತನಕ್ಕೆ ಸೇರಿದ್ದು ಎಂದು ತೆಲುಗು ಮೂಲದ ವಿದ್ಯಾರ್ಥಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ, ಹೇಳಿದಂತೆ ಕೇಳಬೇಕು ಎಂದು ರ‌್ಯಾಗಿಂಗ್ ಮಾಡುತ್ತಿದ್ದಾರೆ ಎಂದು ಸ್ಥಳೀಯ ವಿದ್ಯಾರ್ಥಿಗಳು ಅಲವತ್ತುಗೊಂಡಿದ್ದಾರೆ.

ಠಾಣೆಯಲ್ಲಿ ಸಂಧಾನ: ಗಲಾಟೆ ಸಂಬಂಧ ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಪಾಲಕರು ಹಾಗೂ ಕಾಲೇಜು ಆಡಳಿತ ಮಂಡಳಿ ಜತೆಗೆ ಸಂಧಾನ ನಡೆಸಿರುವ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಲ್ಲರಿಗೂ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ. ಕಾಲೇಜು ಬಳಿ ಪೊಲೀಸ್ ಸಿಬ್ಬಂದಿ ನೇಮಿಸಿದ್ದು, ಪ್ರಕರಣ ಮರುಕಳಿಸದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐಪಿಎಲ್ ಮೂಲ ಕಾರಣ!: ಐಪಿಎಲ್ ಪಂದ್ಯಾವಳಿ ಗಲಾಟೆಗೆ ವಾಸ್ತವ ಕಾರಣ ಎನ್ನಲಾಗಿದೆ. ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ನಡುವಿನ ಪಂದ್ಯಾವಳಿ ವೇಳೆ ಎರಡೂ ಬಣದ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ. ವಾಟ್ಸ್ ಆ್ಯಪ್‌ನಲ್ಲಿ ತಮ್ಮ ತಮ್ಮ ತಂಡದ ಪರವಾಗಿ ಸಂದೇಶ ಹರಿಬಿಡುತ್ತಿದ್ದು ಎರಡೂ ಗುಂಪುಗಳ ನಡುವೆ ವೈಮನಸ್ಸಿಗೆ ಕಾರಣವಾಗಿದೆ, ಪೊಲೀಸ್ ತನಿಖೆಯಲ್ಲೂ ಮೇಲ್ನೋಟಕ್ಕೆ ಇದೆ ಕಾರಣ ಎಂಬ ಮಾತು ಕೇಳಿಬಂದಿದೆ.

ಕ್ಯಾಂಪಸ್‌ನಲ್ಲಿ ತೆಲುಗು ಮೂಲದ ವಿದ್ಯಾರ್ಥಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ, ಕನ್ನಡ ರಾಜ್ಯೋತ್ಸವ ಆಚರಣೆಗೂ ಅಡ್ಡಿಪಡಿಸುತ್ತಿದ್ದಾರೆ, ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವುದು ಮಾಮೂಲಿಯಾಗಿದೆ, ಮೊನ್ನೆ ಏಕಾಏಕಿ ತೆಲುಗು ವಿದ್ಯಾರ್ಥಿಗಳ ಗುಂಪು ಸ್ನೇಹಿತ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಶ್ರವಣ್, ಇಂಜಿನಿಯರಿಂಗ್ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net