ಗೀತ-ಸಂಗೀತ ಗೋಷ್ಠಿಯಲ್ಲಿ ಕನ್ನಡದ ಭಾವಗೀತೆಗಳ ರಸದೌತಣ

06_HSN_06 New
Published on

ಹಾಸನ: ಸಾಹಿತ್ಯೋತ್ಸವ ಅಂಗವಾಗಿ ಸೋಮವಾರ ನಡೆದ ಗೀತ-ಸಂಗೀತ ಗೋಷ್ಠಿ-1 ರಲ್ಲಿ ನಾಡಿನ ಖ್ಯಾತ ಗಾಯಕರು ಹಾಡಿದ ಗೀತೆಗಳು ಸಾಹಿತ್ಯ ಪ್ರಿಯರನ್ನು ಅಕ್ಷರಶಃ ನಾದದ ಅಲೆಯಲ್ಲಿ ತೇಲಿಸಿದವು. ನಾಡಿನ ಹಿರಿಯ ಕಲಾವಿದ ಶ್ರೀನಿವಾಸ ಪ್ರಭು ಅವರ ವ್ಯಾಖ್ಯಾನ, ಪಂಚಮ ಹಳಿಬಂಡಿ ಹಾಗೂ ನಾಗಚಂದ್ರಿಕಾ ಭಟ್ ಅವರು ಪ್ರಸಿದ್ಧ ಕವಿಗಳಿಗೆ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ ಪರಿ ನಿಜಕ್ಕೂ ಸೋಜಿಗ ಎನಿಸುವಂತಿತ್ತು. ಸುಮಾರು ಒಂದು ಕಾಲು ಗಂಟೆಗೂ ಹೆಚ್ಚು ಕಾಲ ಗಾಯಕರು ಸಂಗೀತದ ರಸದೌತಣ ಉಣಬಡಿಸಿದರು.

ವ್ಯಾಖ್ಯಾನದ ವೇಳೆ ಶ್ರೀನಿವಾಸ ಪ್ರಭು ಅವರು ಕವಿ ಹಾಗೂ ಕವಿತೆಗಳ ಹಿನ್ನೆಲೆ, ಮಹತ್ವವನ್ನು ವರ್ಣಿಸುತಾ ಹೋದರು. ಸಾಹಿತ್ಯದ ಮೂಲ ಬೇರು ಸುಗಮ ಸಂಗೀತ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ನಿಜವಾದ ಕೀರ್ತಿ ಕವಿವೇರಣ್ಯರಿಗೆ ಸಲ್ಲುತ್ತದೆ. ಬರಹ ರೂಪದಲ್ಲಿ ಪರಿಚಯವಿದ್ದ ಪ್ರಕಾರವನ್ನು ಸುಗಮ ಸಂಗೀತಕ್ಕೆ ಅಳವಡಿಸಿ ಜನರ ಮನೆ, ಮನಗಳಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಹಳ್ಳಿ, ಹಳ್ಳಿಗೆ ತಲುಪಿಸುವ ಕೆಲಸ ನಡೆದಿರುವುದು ಹೆಮ್ಮೆಯ ಸಂಗತಿ ಎಂದರೆ ಅತಿಶಯೋಕ್ತಿ ಎನಿಸದು ಎಂದು ಸುಗಮ ಸಂಗೀತದ ವಿಶೇಷತೆಯನ್ನು ಅರ್ಥಪೂರ್ಣವಾಗಿ ಬಣ್ಣಿಸಿದರು.

ಬಿಎಂಶ್ರೀ ಅವರ ‘ಕರುಣಾಳು ಬಾ ಬೆಳಕೆ ಮುಸುಕಿದೆ ಮಬ್ಬಿನಲ್ಲಿ’, ಉಯಿಲುಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಭಾಷೆ, ನೆಲ, ಜಲದ ಮಹತ್ವ ಸಾರುವ ಶ್ರೇಷ್ಠತೆ ಎಂದಿಗೂ ಮರೆಯಲಾಗದು ಎಂದು ವರ್ಣಿಸಿದರು. ಹಾಗೆಯೇ ಕುವೆಂಪು, ಬೇಂದ್ರೆ, ಪಿ. ಕಾಳಿಂಗರಾವ್, ಚನ್ನವೀರ ಕಣವಿ, ಕೆ.ಎಸ್. ನರಸಿಂಹಸ್ವಾಮಿ, ಮೊದಲಾದ ಕವಿಗಳು ರಚಿಸಿರುವ ಕವನಗಳು ಸುಗಮ ಸಂಗೀತಕ್ಕೆ ಹೊಸ ಆಯಾಮ ತಂದು ಕೊಟ್ಟಿವೆ ಎಂದು ತಿಳಿಸಿದರು.

ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ಶ್ರೀನಿವಾಸ ಉಡುಪ ಮೊದಲಾದ ಗಾಯಕರುಗಾರು ಜನಮನ ಸೂರೆಗೊಳ್ಳುವಂತೆ ಹಾಡುವ ಮೂಲಕ ಶಾಶ್ವತವಾಗಿ ಕವಿ ಹಾಗೂ ಕವಿತೆ ಉಳಿಯುವಂತೆ ಮಾಡಿವೆ. ಕವಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮ ಕೆಲಸ ಮಾಡಿದೆ ಎಂದು ಹೇಳಿದರು.

ಒಬ್ಬೊಬ್ಬ ಕವಿ, ಕವಿ ಪರಿಚಯದೊಂದಿಗೆ ಅವರ ಪ್ರಖ್ಯಾತ ಕವಿತೆಗಳನ್ನು ಹಾಡಲಾಯಿತು. ‘ಹೊತ್ತಿತೊ ಕನ್ನಡದ ದೀಪ’, ‘ಉಡುಗಡವೆಷ್ಟಿತ ಚಂದ್ರಸುಶೋಚಿತ,’ ‘ಹೂವು ಹೊರಳುವವರು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನ ಕಡೆಗೆ’, ‘ಯಾವ ಮೋಹನ ಮುರಳಿ ಕರೆಯಿತೊ ದೂರ ತೀರಕ್ಕೆ ನಿನ್ನನ್ನು’, ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲಿ’, ‘ಇಳಿದು ಬಾ ತಾಯೆ ಇಳಿದು ಬಾ’, ‘ಪಂಚಮಿ ಹಬ್ಬ ಉಳಿದವಾ ದಿನ ನಾಕಾ ಅಣ್ಣಾ ಬರಲಿಲ್ಲ ಯಾಕಾ ಕರೆಯಾಕ,’ ಹೀಗೆ ಹತ್ತಾರು ಹಾಡುಗಳಿಗೆ ನಾಗಚಂದ್ರಿಕಾ ಭಟ್ ಹಾಗೂ ಪಂಚಮ ಹಳಿಬಂಡಿ ದನಿಯಾದರು. ಕೀ ಬೋರ್ಡ್‌ನಲ್ಲಿ ಕೃಷ್ಣ ಉಡುಪ, ತಬಲದಲ್ಲಿ ಎಂ.ಸಿ. ಶ್ರೀನಿವಾಸ್ ಹಿನ್ನೆಲೆ ಸಂಗೀತ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net