ಗಿರಿಮಠದ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ

MLA HY Meti, Vajpayee Housing Scheme, Work Order Letter to Beneficiaries, Kamatagi
ಕಮತಗಿ ಪಟ್ಟಣದ ಪಾರ್ವತಿ- ಪರಮೇಶ್ವರ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ವಾಜಪೇಯಿ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿದರು. ಮುರುಗೇಶ ಕಡ್ಲಿಮಟ್ಟಿ, ರಮೇಶ ಜಮಖಂಡಿ, ದೇವಿಪ್ರಸಾದ ನಿಂಬಲಗುಂದಿ, ಬಸವರಾಜ ಕುಂಬಳಾವತಿ ಇತರರಿದ್ದರು.
Published on

ಕಮತಗಿ: ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಹೇಳಿದರು.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರ ಅಭಿವೃದ್ಧಿ ಕೋಶ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಪಾರ್ವತಿ- ಪರಮೇಶ್ವರ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಜಪೇಯಿ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದು -ಮುಸ್ಲಿಮರ ಭಾವೈಕ್ಯ ಸ್ಥಳವಾಗಿರುವ ಗಿರಿಮಠವು ಬಹುಜನರ ಆರಾಧನೆಯ ಧಾರ್ಮಿಕ ಕೇಂದ್ರವಾಗಿದೆ. ಜಾಗೃತ ಸ್ಥಳವೂ ಆಗಿದ್ದು, ಈ ಸ್ಥಾನವನ್ನು ಅಭಿವೃದ್ಧಿಗೊಳಿಸಬೇಕು ಎನ್ನುವ ಭಾವನೆ ಮೊದಲಿನಿಂದಲೂ ಇದ್ದು, ಈಗ ಅದು ಕಾರ್ಯರೂಪಕ್ಕೆ ಬರುತ್ತಿದೆ ಎಂದರು.

ಬಾಗಲಕೋಟೆ ನಗರಸಭೆಗೆ ಮಂಜೂರು ಆಗಿದ್ದ 445 ಮನೆಗಳಲ್ಲಿ ಕಮತಗಿ ಪಪಂಗೆ 145 ಹಾಗೂ ಅಮೀನಗಡ ಪಪಂಗೆ 145 ಮನೆಗಳನ್ನು ನೀಡಿದ್ದು, ಕಮತಗಿಯಲ್ಲಿ 133 ಫಲಾನುಭವಿಗಳು ಅರ್ಜಿ ಹಾಕಿದ್ದು ಅವು ಎಲ್ಲವೂ ಮಂಜೂರು ಆಗಿವೆ. ನಿಗದಿತ ಸಮಯದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ವಿಧಾನಸಭೆಯ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗಾಗಿ ಅವರ ಕೈ ಬಲಪಡಿಸಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ಮಾತನಾಡಿ, 1.65 ಕೋಟಿ ರೂ. ಹಣವನ್ನು ವಿವಿಧ ಸಮಾಜಗಳಿಗೆ ಕೊಡಲಾಗುವುದು. ಕಮತಗಿ ಕ್ರಾಸ್‌ದಿಂದ ಬಸ್ ನಿಲ್ದಾಣದವರೆಗೆ ದ್ವಿಪಥ ರಸ್ತೆ ಸುಧಾರಣೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಪಪಂ ಸದಸ್ಯರಾದ ರಮೇಶ ಜಮಖಂಡಿ, ದೇವಿಪ್ರಸಾದ ನಿಂಬಲಗುಂದಿ, ಬಸವರಾಜ ಕುಂಬಳಾವತಿ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಮುಖ್ಯ ವೈದ್ಯಾಧಿಕಾರಿ ಎಫ್.ಎನ್. ಹುಲ್ಲಿಕೇರಿ ಮಾತನಾಡಿದರು.

ಪಾರ್ವತಿ -ಪರಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರಲಿಂಗಪ್ಪ ಮಂಕಣಿ, ಮುಖಂಡರಾದ ಹುಚ್ಚಣ್ಣ ಸಿಂಹಾಸನ, ಗಂಗಪ್ಪ ಭೂತಲ, ಪರಸಪ್ಪ ಜಗ್ಗಲ, ಪಪಂ ಸದಸ್ಯರಾದ ಗುರುಲಿಂಗಪ್ಪ ಪಾಟೀಲ, ಲಕ್ಷ್ಮಣ ಮಾದರ, ಚಂದು ಕುರಿ, ನೇತ್ರಾವತಿ ನಿಂಬಲಗುಂದಿ, ಮಂಜುಳಾ ಮುರಾಳ, ಹುಚ್ಚವ್ವ ಹಾಗೇದಾಳ, ನಂದಾ ದ್ಯಾಮಣ್ಣವರ, ರಮೇಶ ಲಮಾಣಿ, ನಭಿ ತಹಸೀಲ್ದಾರ್, ವಿದ್ಯಾಧರ ಮಳ್ಳಿ, ನಾಗೇಶ ಮುರಾಳ ಇದ್ದರು. ರಮೇಶ ಪದಕಿ ನಿರೂಪಿಸಿದರು. ಎಸ್.ಪಿ. ಗಣಾಚಾರಿ ವಂದಿಸಿದರು.

ಸಿದ್ದರಾಮಯ್ಯ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದೆ. ಲೋಕಸಭೆಯ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲುತ್ತಾರೆ. ಶಾಸಕ ಎಚ್.ವೈ.ಮೇಟಿ ಅವರು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ರಮೇಶ ಜಮಖಂಡಿ, ಸದಸ್ಯರು, ಪಟ್ಟಣ ಪಂಚಾಯಿತಿ, ಕಮತಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net